ಲಿಫ್ಟ್‌ನಲ್ಲಿ ಬಂಧಿಯಾದ ಸ್ಮಿತ್; ಚಾಕೊಲೇಟ್ ಕೊಟ್ಟ ಮಾರ್ನಸ್ ಮೆಲ್ಬರ್ನ್: ಆಸ್ಟ್ರೇಲಿಯಾ ತಂಡದ ಬ್ಯಾಟರ್ ಸ್ಟೀವ್ ಸ್ಮಿತ್ ಹೋಟೆಲ್‌ನ ಲಿಫ್ಟ್‌ನಲ್ಲಿ ಸುಮಾರು ಒಂದು ತಾಸು ಬಂಧಿಯಾದ ಘಟನೆ ಗುರುವಾರ ನಡೆದಿದೆ. ಅವರನ್ನು ಬಂಧಮುಕ್ತಗೊಳಿಸಲು ಸಹ ಆಟಗಾರ ಮಾರ್ನಸ್ ಲಾಬುಷೇನ್ ಪ್ರಯತ್ನಿಸಿದರು. ತಾವು ಬಂಧಿಯಾಗಿ ಲಿಫ್ಟ್‌ನಲ್ಲಿರುವುದನ್ನು ಸ್ಮಿತ್ ಅವರು ಅವರು ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಮಾಡಿದರು. ಲಾಕ್ ಆಗಿದ್ದಲಿಫ್ಟ್ ಬಾಗಿಲನ್ನು ಕಬ್ಬಿಣದ ಸಲಾಕೆಯ ಮೂಲಕ ತೆರೆಯಲು ಯತ್ನಿಸಿದ ಲಾಬುಷೇನ್, ಸಣ್ಣ ಕಿಂಡಿಯ ಮೂಲಕ ಸ್ಮಿತ್‌ಗೆ ಚಾಕೊಲೆಟ್ ಕೂಡ ನೀಡಿದರು. ಹೋಟೆಲ್‌ನ ಲಿಫ್ಟ್ ಟೆಕ್ನಿಷಿಯನ್‌ಗಳೂ ಕೂಡ ಈ ಸಂದರ್ಭದಲ್ಲಿ ಬಾಗಿಲು ತೆರೆಯಲು ಪ್ರಯತ್ನಿಸಿದರು. ‘ನನ್ನ ಕೋಣೆಯ ಇರುವ ಅಂತಸ್ತಿನಲ್ಲಿ ಇಳಿಯುವ ಹೊತ್ತಿಗೆ ಲಿಫ್ಟ್ ಬಾಗಿಲುಗಳು ತೆರೆಯಲಿಲ್ಲ. ನಾನು ಎಳೆದು ತೆಗೆಯಲು ಪ್ರಯತ್ನಿಸಿ ವಿಫಲನಾದೆ. ಆ ಬದಿಯಲ್ಲಿ ಹೊರಗಡೆ ಇದ್ದ ಮಾರ್ನಸ್ ಕೂಡ ಬಾಗಿಲು ತೆರೆಯಲು ಪ್ರಯತ್ನಿಸಿದರು. ಕೊನೆಗೂ ಸುರಕ್ಷಿತವಾಗಿ ಕೋಣೆಗೆ ಮರಳಿದೆ. ಸುಮಾರು 55 ನಿಮಿಷ ಲಿಫ್ಟ್‌ನಲ್ಲಿ ಬಂಧಿಯಾಗಿದ್ದು ವಿಭಿನ್ನ ಅನುಭವ’ ಎಂದು ಸ್ಮಿತ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.