‘ಹನುಮ ವಿಹಾರಿ, ಶ್ರೇಯಸ್‌ಗೆ ಅವಕಾಶ ಸಿಗಲಿದೆ’: ರಾಹುಲ್ ದ್ರಾವಿಡ್ ಜೊಹಾನ್ಸ್‌ಬರ್ಗ್‌: ಹನುಮ ವಿಹಾರಿ ಮತ್ತು ಶ್ರೇಯಸ್‌ ಅಯ್ಯರ್ ಅವರು ಅವಕಾಶಗಳು ಸಿಕ್ಕಿದಾಗಲೆಲ್ಲ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಹೆಚ್ಚು ಅವಕಾಶಗಳಿಗಾಗಿ ಸ್ವಲ್ಪ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಗುರುವಾರ ಮುಕ್ತಾಯಗೊಂಡ ಜೊಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಬೆನ್ನುನೋವು ಕಾಡಿದ ಕಾರಣ ಮತ್ತು ಶ್ರೇಯಸ್ ಅಯ್ಯರ್‌ಗೆ ಹೊಟ್ಟೆಯಲ್ಲಿ ಬೇನೆ ಕಾಣಿಸಿಕೊಂಡ ಕಾರಣ ಹನುಮ ವಿಹಾರಿ ಅವರನ್ನು ಅಂತಿಮ 11ರಲ್ಲಿ ಸೇರಿಸಿಕೊಳ್ಳಲಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಅವರು ಅಜೇಯ 40 ರನ್ ಗಳಿಸಿದ ಕಾರಣ ದಕ್ಷಿಣ ಆಫ್ರಿಕಾದ ಜಯಕ್ಕೆ 200ಕ್ಕೂ ಹೆಚ್ಚು ಮೊತ್ತದ ಗುರಿ ನೀಡಲು ಭಾರತಕ್ಕೆ ಸಾಧ್ಯವಾಗಿತ್ತು. ಹನುಮ ವಿಹಾರಿ ಅವರ ಸಾಮರ್ಥ್ಯಕ್ಕೆ ತಕ್ಕ ಅವಕಾಶಗಳು ಸಿಗುತ್ತಿಲ್ಲ. ‘ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಅವರು ಅತ್ಯುತ್ತಮ ಬ್ಯಾಟರ್‌ಗಳು. ಆದರೆ ಸದ್ಯ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಿಗೆ ಆದ್ಯತೆ ನೀಡಬೇಕಾಗಿದೆ. ಹನುಮ ಮತ್ತು ಶ್ರೇಯಸ್‌ಗೆ ಇನ್ನೂ ಸಾಕಷ್ಟು ಅವಕಾಶಗಳ ಸಾಧ್ಯತೆಗಳಿವೆ’ ಎಂದು ದ್ರಾವಿಡ್ ಹೇಳಿದರು. ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಕೇಪ್‌ಟೌನ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ಗೆ ಅಲಭ್ಯರಾಗಿರುವರು ಎಂದು ದ್ರಾವಿಡ್ ವಿವರಿಸಿದರು. ಪಂದ್ಯ ಇದೇ 11ರಂದು ಆರಂಭವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.