ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಮುಂಬೈನಲ್ಲಿ ಕ್ವಾರಂಟೈನ್‌ ನವದೆಹಲಿ: ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡವು, ನ್ಯೂಜಿಲೆಂಡ್‌ಗೆ ತೆರಳುವ ಮೊದಲು ಭಾನುವಾರ ಮುಂಬೈನಲ್ಲಿ ಸೇರಲಿದ್ದು, ಒಂದು ವಾರ ಕ್ವಾರಂಟೈನ್‌ನಲ್ಲಿ ಇರಲಿದೆ. ಮಿಥಾಲಿ ರಾಜ್‌ ನಾಯಕತ್ವದ ಭಾರತ ತಂಡದ ಆಟಗಾರ್ತಿಯರು ಇತ್ತೀಚೆಗೆ ಡೆಹ್ರಾಡೂನ್‌ನಲ್ಲಿ ಸೇರಿದ್ದರು ಮತ್ತು ತಂಡದಲ್ಲಿನ ಯುವ ಆಟಗಾರ್ತಿಯರಿಗೆ ನಾಯಕತ್ವದ ಕೌಶಲಗಳನ್ನು ಬೆಳಸಿಕೊಳ್ಳುವ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ತಂಡದ 15 ಮಂದಿ ಸದಸ್ಯರು ಮತ್ತು ಮೂವರು ಕಾಯ್ದಿರಿಸಿದ ಆಟಗಾರ್ತಿಯರನ್ನು ಮುಂಬೈನಲ್ಲಿ ಸೇರುವಂತೆ ತಿಳಿಸಲಾಗಿದ್ದು, ಒಂದು ವಾರದವರೆಗೆ ಪ್ರತ್ಯೇಕವಾಸದಲ್ಲಿರಲಿದ್ದಾರೆ. ತಂಡವು ಇದೇ 24ರಂದು ನ್ಯೂಜಿಲೆಂಡ್‌ಗೆ ತೆರಳುವ ನಿರೀಕ್ಷೆಯಿದೆ. ಅಲ್ಲಿಗೆ ತೆರಳಿದ ಬಳಿಕ ಮತ್ತೊಂದು ಬಾರಿ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮೊದಲು ಫೆಬ್ರವರಿ 11ರಿಂದ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಸರಣಿ ಮತ್ತು ಒಂದು ಟಿ20 ಪಂದ್ಯವನ್ನು ಆಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.