ಕೆಂಟ್‌ ಪರ ಆಡಲಿರುವ ಸೈನಿ ಕೆಂಟ್‌ (ಪಿಟಿಐ): ಭಾರತದ ವೇಗದ ಬೌಲರ್ ನವದೀಪ್‌ ಸೈನಿ ಅವರು ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ನ ಈ ಋತುವಿನಲ್ಲಿ ಕೆಂಟ್‌ ತಂಡದ ಪರ ಎಂಟು ಪಂದ್ಯಗಳನ್ನುಆಡಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಸೈನಿ, ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಐದನೇ ಟೆಸ್ಟ್‌ ಪಂದ್ಯಕ್ಕೆ ಮುನ್ನ ಭಾರತ ತಂಡದ ನೆಟ್‌ ಬೌಲರ್‌ ಆಗಿದ್ದರು. 29 ವರ್ಷದ ಸೈನಿ 2019ರ ಆಗಸ್ಟ್‌ನಲ್ಲಿ ಟಿ20 ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಮೂರೂ ಮಾದರಿಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ತಂಡದಲ್ಲಿ ಸ್ಥಾನವನ್ನು ಖಚಿತಪಡಿಸಲು ವಿಫಲರಾಗಿದ್ದರು. ‘ಭಾರತದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಸೈನಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸದ ವಿಷಯ. ಅವರು ಈ ಋತುವಿನಲ್ಲಿ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪಂದ್ಯಗಳು ಹಾಗೂ ರಾಯಲ್‌ ಲಂಡನ್‌ ಕಪ್‌ನಲ್ಲಿ ಐದು ಪಂದ್ಯಗಳನ್ನು ಆಡಲಿದ್ದಾರೆ’ ಎಂದು ಕೆಂಟ್‌ ತಂಡದ ಪ್ರಕಟಣೆ ತಿಳಿಸಿದೆ. ‘ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಲಭಿಸಿದ್ದು ಹೆಮ್ಮೆಯ ವಿಚಾರ. ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಉತ್ಸುಕನಾಗಿದ್ದೇನೆ’ ಎಂದು ಸೈನಿ ಪ್ರತಿಕ್ರಿಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.