: ಅಭ್ಯಾಸಕ್ಕೆ ಮರಳಿದ ನಾಯಕ ವಿರಾಟ್ ಕೊಹ್ಲಿ ಕೇಪ್‌ಟೌನ್: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಇದರೊಂದಿಗೆ ಅವರು ದಕ್ಷಿಣ ಅಫ್ರಿಕಾ ಎದುರಿನ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದೇ 11 ರಿಂದ 15ರವರೆಗೆ ಕೊನೆಯ ಟೆಸ್ಟ್ ನಡೆಯಲಿದೆ. ಬೆನ್ನುನೋವು ಇದ್ದ ಕಾರಣಕ್ಕೆ ವಿರಾಟ್, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಸರಣಿಯ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಕೆ.ಎಲ್. ರಾಹುಲ್ ನಾಯಕತ್ವ ವಹಿಸಿದ್ದರು. ಆ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ತಂಡವು ಜಯಿಸಿತ್ತು. ಮೂರು ಪಂದ್ಯಗಳ ಸರಣಿಯು 1–1ರಿಂದ ಸಮವಾಗಿತ್ತು. ಕೊನೆಪಂದ್ಯದಲ್ಲಿ ಜಯಿಸುವ ತಂಡವು ಸರಣಿ ವಿಜೇತರ ಪಟ್ಟ ಗಳಿಸಲಿದೆ. ‘ನಾವೀಗ ರಮಣೀಯ ವಾತಾವರಣವಿರುವ ಕೇಪ್‌ಟೌನ್ ನಲ್ಲಿದ್ದೇವೆ. ಭಾರತ ತಂಡವು ಈಗ ಮೂರನೇ ಟೆಸ್ಟ್‌ಗೆ ಪೂರ್ವಸಿದ್ಧತೆ ನಡೆಸುತ್ತಿದೆ’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ವಿರಾಟ್ ಫಿಟ್‌ ಆಗಿ ಮರಳಿದರೆ ಹನುಮವಿಹಾರಿ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಅಭ್ಯಾಸದ ಸಂದರ್ಭದಲ್ಲಿ ಫೀಲ್ಡಿಂಗ್, ಕ್ಯಾಚಿಂಗ್ ಮತ್ತು ಫುಟ್‌ಬಾಲ್ ಆಡಿದರು. ‘ವಿರಾಟ್ ಎಲ್ಲ ರೀತಿಯಿಂದಲೂ ಫಿಟ್ ಆಗಿದ್ದಾರೆಂಬ ವಿಶ್ವಾಸವಿದೆ. ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಭರವಸೆ ಇದೆ.ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರು ಕೂಡ ಫಿಟ್ ಆಗಿದ್ದಾರೆಂದು ಮೂಲಗಳು ತಿಳಿಸಿವೆ. ಅವರು ಕೂಡ ಕಣಕ್ಕಿಳಿದರೆ ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಬೇಕಾಗಬಹುದು.ಎರಡನೇ ಟೆಸ್ಟ್‌ನಲ್ಲಿ ಸಿರಾಜ್ ಸ್ನಾಯುಸೆಳೆತದಿಂದ ಬಳಲಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ ಭಾರತ ತಂಡವು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ದಾಖಲೆ ಬರೆದಿರುವ ತಂಡವು ಇಲ್ಲಿಯೂ ವಿಜಯಪತಾಕೆ ಹಾರಿಸುವ ಛಲದಲ್ಲಿದೆ. ವಿರಾಟ್ ಕೊಹ್ಲಿ ಸೇರಿದಂತೆ ಇನ್ನುಳಿದ ಆಟಗಾರರೂ ಅಭ್ಯಾಸದಲ್ಲಿ ಭಾಗವಹಿಸಿದ್ದರು. ರಿಷಭ್ ಪಂತ್ ಬ್ಯಾಟಿಂಗ್‌ ಕೌಶಲ ಸುಧಾರಣೆ ಮಾಡಿಕೊಳ್ಳುವತ್ತ ಹೆಚ್ಚು ಒತ್ತು ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.