ಎರಡನೇ ಕ್ರಿಕೆಟ್‌ ಟೆಸ್ಟ್‌: ಪಾಕ್‌ ಗೆಲುವಿಗೆ ಕಠಿಣ ಗುರಿ ಗಾಲ್‌ (ಪಿಟಿಐ): ಧನಂಜಯ ಡಿಸಿಲ್ವ ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ 508 ರನ್‌ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಪಾಕ್‌ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ಗೆ 89 ರನ್‌ ಗಳಿಸಿದೆ. ಕೊನೆಯ ದಿನವಾದ ಗುರುವಾರದ ಆಟದಲ್ಲಿ ಗೆಲುವಿಗೆ ಇನ್ನೂ 419 ರನ್‌ ಗಳಿಸುವ ಗುರಿ ಬಾಬರ್‌ ಅಜಮ್ ಬಳಗದ ಮುಂದಿದೆ. ಇದಕ್ಕೂ ಮುನ್ನ 5 ವಿಕೆಟ್‌ಗೆ 176 ರನ್‌ಗಳಿಂದ ಆಟ ಮುಂದುವರಿಸಿದ ಆತಿಥೇಯರು, 8 ವಿಕೆಟ್‌ಗೆ 360 ರನ್‌ ಗಳಿಸಿ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡರು. 109 ರನ್‌ ಗಳಿಸಿದ ಧನಂಜಯ ತಂಡಕ್ಕೆ ಆಸರೆಯಾದರು. 171 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಹೊಡೆದರು. ನಾಯಕ ದಿಮುತ್‌ ಕರುಣರತ್ನೆ (61) ಮತ್ತು ರಮೇಶ್‌ ಮೆಂಡಿಸ್‌ (ಅಜೇಯ 45) ಅವರೂ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌ ಶ್ರೀಲಂಕಾ 378 (103 ಓವರ್). ಪಾಕಿಸ್ತಾನ 231 (88.1 ಓವರ್) ಎರಡನೇ ಇನಿಂಗ್ಸ್‌ ಶ್ರೀಲಂಕಾ 8ಕ್ಕೆ 360 ಡಿಕ್ಲೇರ್ಡ್‌ (ದಿಮುತ್‌ ಕರುಣರತ್ನೆ 61, ಧನಂಜಯ ಡಿಸಿಲ್ವ 109, ರಮೇಶ್‌ ಮೆಂಡಿಸ್‌ ಅಜೇಯ 45) ಪಾಕಿಸ್ತಾನ 1ಕ್ಕೆ 89 (28 ಓವರ್) ಅಬ್ದುಲ್ಲಾ ಶಫೀಕ್‌ 16, ಇಮಾಮ್ ಉಲ್‌ ಹಕ್ ಬ್ಯಾಟಿಂಗ್ 46, ಬಾಬರ್‌ ಅಜಂ ಬ್ಯಾಟಿಂಗ್‌ 26) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.