ವಿಂಡೀಸ್ ಸರಣಿ; ಟೀಮ್ ಇಂಡಿಯಾಗೆ ಮತ್ತಿಬ್ಬರು ಹೊಸ ಆಟಗಾರರ ಸೇರ್ಪಡೆ! ನವದೆಹಲಿ: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಗಾಗಿ ಟೀಮ್ ಇಂಡಿಯಾಗೆ ಹೊಸದಾಗಿ ಇಬ್ಬರು ಮೀಸಲು ಆಟಗಾರರನ್ನು ಸೇರ್ಪಡೆಗೊಳಿಸಲಾಗಿದೆ. ಕೊರೊನಾ ಸೋಂಕಿನ ಭೀತಿಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಬ್ಯಾಟರ್ ಶಾರೂಕ್ ಖಾನ್ ಹಾಗೂ ಎಡಗೈ ಸ್ಪಿನ್ನರ್ ರವಿ ಶ್ರೀನಿವಾಸ್ ಸಾಯಿ ಕಿಶೋರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ:ಭಾರತ ವಿರುದ್ಧ ಟ್ವೆಂಟಿ-20 ಸರಣಿ: ವೆಸ್ಟ್‌ ಇಂಡೀಸ್‌ಗೆ ಕೀರನ್ ಪೊಲಾರ್ಡ್‌ ನಾಯಕ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಗಾಗಿ ಟೀಮ್ ಇಂಡಿಯಾವನ್ನು ಈಗಾಗಲೇ ಘೋಷಿಸಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಶಾರೂಕ್ ಖಾನ್ ಹಾಗೂ ಸಾಯಿ ಕಿಶೋರ್ ಟೀಮ್ ಇಂಡಿಯಾ ಆಟಗಾರರ ಜೊತೆಗೆ ಜೀವ ಸುರಕ್ಷಾ ವಲಯವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಕದಿನ ಸರಣಿಯು ಅಹಮದಾಬಾದ್‌ನಲ್ಲಿ ಮತ್ತು ಟಿ20 ಸರಣಿಯು ಕೋಲ್ಕತ್ತದಲ್ಲಿ ಆಯೋಜನೆಯಾಗಲಿವೆ. ಮೊದಲ ಏಕದಿನ ಪಂದ್ಯವು ಫೆಬ್ರುವರಿ 6ರಂದು ನಡೆಯಲಿದೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಅಮೋಘ ಜಯವನ್ನು ತಂದಿತ್ತ ಶಾರೂಕ್ ಖಾನ್, ಭಾರತದ ಪರ ನೀಲಿ ಜೆರ್ಸಿಯಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿನ ಆಟ ಪ್ರದರ್ಶಿಸಿದ್ದರು. ಅತ್ತ ಸಾಯಿ ಕಿಶೋರ್ ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.