ಡೆರಿಲ್‌ ಮಿಚೆಲ್‌ಗೆ ‘ಐಸಿಸಿ ಕ್ರೀಡಾಸ್ಪೂರ್ತಿ’ ಗೌರವ ದುಬೈ: ನ್ಯೂಜಿಲೆಂಡ್‌ ತಂಡದ ಬ್ಯಾಟರ್‌ ಡೆರಿಲ್ ಮಿಚೆಲ್ ಅವರಿಗೆ ಬುಧವಾರ ‘2021ರ ಐಸಿಸಿ ಕ್ರೀಡಾಸ್ಫೂರ್ತಿ‘ ಗೌರವ ಸಂದಿದೆ. ಹೋದ ವರ್ಷದ ನವೆಂಬರ್ 10ರಂದು ನಡೆದ ಇಂಗ್ಲೆಂಡ್‌ ವಿರುದ್ಧದ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮಿಚೆಲ್‌ ರನ್‌ಗಾಗಿ ಓಡುವ ವೇಳೆ ಬೌಲರ್ ಆದಿಲ್ ರಶೀದ್‌ಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದರು. ಒಂದು ರನ್‌ ಸುಲಭವಾಗಿ ಗಳಿಸಬಹುದಿತ್ತಾದರೂ ಮಿಚೆಲ್ ರನ್ ತೆಗೆದುಕೊಳ್ಳದೆ ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್‌ ಜಿಮ್ಮಿ ನೀಶಮ್ ಅವರನ್ನು ವಾಪಸ್ ಕಳಿಸಿದ್ದರು. ಈ ಘಟನೆಗೆ ಕ್ರೀಡಾ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಈ ಘಟನೆಯೇ ನ್ಯೂಜಿಲೆಂಡ್ ಆಟಗಾರನಿಗೆ ಐಸಿಸಿ ಪುರಸ್ಕಾರ ತಂದುಕೊಟ್ಟಿದೆ. ಅಬುಧಾಬಿಯಲ್ಲಿ ನಡೆದಿದ್ದ ಈ ಪಂದ್ಯವನ್ನು ನ್ಯೂಜಿಲೆಂಡ್‌ ಐದು ವಿಕೆಟ್‌ಗಳಿಂದ ಗೆದ್ದು ಫೈನಲ್‌ಗೇರಿತ್ತು. ಪಂದ್ಯದ 18ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. 167 ರನ್‌ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ಈ ಸಂದರ್ಭದಲ್ಲಿ ನಾಲ್ಕು ವಿಕೆಟ್‌ಗೆ 133 ರನ್‌ ಗಳಿಸಿತ್ತು. ನೀಶಮ್ ಹೊಡೆದ ಚೆಂಡನ್ನು ತಡೆಯಲು ರಶೀದ್‌ ಮುಂದಾದಾಗ ನಾನ್‌ಸ್ಟ್ರೈಕ್ ತುದಿಯಲ್ಲಿದ್ದ ಮಿಚೆಲ್ ಡಿಕ್ಕಿ ಹೊಡೆದಿದ್ದರು. ತೀವ್ರ ಒತ್ತಡದಲ್ಲಿದ್ದ ತಾನು ರಶೀದ್‌ಗೆ ಅಡ್ಡಿಪಡಿಸಿದ್ದರಿಂದ ರನ್‌ಗಾಗಿ ಓಡಲಿಲ್ಲ ಎಂದು ಮಿಚೆಲ್ ಹೇಳಿದ್ದರು. ಪಂದ್ಯದಲ್ಲಿ ಆರಂಭಿಕ ಬ್ಯಾಟರ್‌ ಆಗಿ ಕಣಕ್ಕಿಳಿದಿದ್ದ ಮಿಚೆಲ್‌ 47 ಎಸೆತಗಳಲ್ಲಿ ಔಟಾಗದೆ 72 ರನ್‌ ಗಳಿಸಿ ತಂಡವನ್ನು ಜಯದ ಸೇರಿಸಿದ್ದರು. ಡೆರಿಲ್ ಮಿಚೆಲ್ ಈ ಪ್ರಶಸ್ತಿ ಪಡೆದ ಕಿವೀಸ್ನ ನಾಲ್ಕನೇ ಕ್ರಿಕೆಟಿಗನಾಗಿದ್ದಾರೆ. ಈ ಹಿಂದೆ ಡೇನಿಯಲ್ ವೆಟೋರಿ, ಬ್ರೆಂಡನ್ ಮೆಕಲಮ್ ಮತ್ತು ಕೇನ್ ವಿಲಿಯಮ್ಸನ್ ಈ ಶ್ರೇಯ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.