ಭಾರತ ಎದುರಿನ ಟ್ವೆಂಟಿ20 ಸರಣಿ: ವೆಸ್ಟ್ ಇಂಡೀಸ್‌ ತಂಡಕ್ಕಿಲ್ಲ ಶಿಮ್ರಾನ್ ಬಲ ಸೇಂಟ್ ಜಾನ್ಸ್‌: ಸ್ಫೋಟಕ ಶೈಲಿಯ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರು ಭಾರತ ಎದುರಿನ ಟ್ವೆಂಟಿ20 ಸರಣಿಗೆ ಪ್ರಕಟಿಸಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. 16 ಮಂದಿಯ ತಂಡವನ್ನು ಸೋಮವಾರ ಪ್ರಕಟಿಸಿದ್ದು ಫಿಟ್‌ನೆಸ್ ಸಮಸ್ಯೆಯಿಂದಾಗಿ ಹೆಟ್ಮೆಯರ್ ಅವರನ್ನು ಸೇರಿಸಿಕೊಳ್ಳಲಿಲ್ಲ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರುವರಿ 6ರಿಂದ 11ರ ವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿದ್ದು 16ರಿಂದ 20ರ ವರೆಗೆ ಕೋಲ್ಕತ್ತದಲ್ಲಿ ಮೂರು ಪಂದ್ಯಗಳ ಟ್ವೆಂಟಿ20 ಸರಣಿ ನಡೆಯಲಿದೆ. ಏಕದಿನ ಸರಣಿಗೆ ಕೀರನ್ ಪೊಲಾರ್ಡ್ ನಾಯಕತ್ವದ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ‍ಪೊಲಾರ್ಡ್ ಸೇರಿದಂತೆ ಏಕದಿನ ಪಂದ್ಯಗಳಲ್ಲಿ ಆಡುವ 11 ಮಂದಿ ಟ್ವೆಂಟಿ20 ತಂಡದಲ್ಲೂ ಸ್ಥಾನ ಗಳಿಸಿದ್ದಾರೆ. ಹೆಟ್ಮೆಯರ್ ದೈಹಿಕ ಫಿಟ್‌ನೆಸ್‌ ಕಡೆಗೆ ಗಮನ ನೀಡುತ್ತಿಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ಕೋಚ್ ಫಿಲ್ ಸಿಮೋನ್ಸ್‌ ಜನವರಿ ಮೊದಲ ವಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರವೂ ಅವರು ಆಡಲು ಫಿಟ್‌ ಆಗಲಿಲ್ಲ. ಇಂಗ್ಲೆಂಡ್ ಎದುರಿನ ಮೂರನೇ ಪಂದ್ಯದಲ್ಲಿ ರೊವ್ಮನ್ ಪೊವೆಲ್ ಅವರಿಗೆ ಅವಕಾಶ ನೀಡುವುದಕ್ಕಾಗಿ ಒಡೀನ್ ಸ್ಮಿತ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಒಡೀನ್ ಅವರನ್ನು ಭಾರತ ಎದುರಿನ ಸರಣಿಗೆ ಆಯ್ಕೆ ಮಾಡಲಾಗಿದೆ. ಟ್ವೆಂಟಿ20 ತಂಡ: ಕೀರನ್ ಪೊಲಾರ್ಡ್‌ (ನಾಯಕ), ನಿಕೋಲಸ್ ಪೂರನ್‌ (ಉಪನಾಯಕ), ಫ್ಯಾಬಿಯನ್ ಅಲೆನ್‌, ಡರೆನ್ ಬ್ರಾವೊ, ರಾಸ್ಟನ್ ಚೇಸ್‌, ಶೆಲ್ಡನ್ ಕಾಟ್ರೆಲ್‌, ಡೊಮಿನಿಕ್ ಡ್ರೇಕ್ಸ್‌, ಜೇಸನ್ ಹೋಲ್ಡರ್, ಶಾಯಿ ಹೋಪ್‌, ಅಕೀಲ್ ಹೊಸೇನ್‌, ಬ್ರೆಂಡನ್ ಕಿಂಗ್‌, ರೊವ್ಮನ್ ಪೊವೆಲ್‌, ರೊಮಾರಿಯೊ ಶೆಫರ್ಡ್‌, ಒಡೀನ್ ಸ್ಮಿತ್‌, ಕೈಲ್ ಮೇಯರ್ಸ್‌, ಹೇಡನ್ ವಾಲ್ಶ್‌ ಜೂನಿಯರ್‌. ಹೋಲ್ಡರ್‌ಗೆ 4 ಎಸೆತಗಳಲ್ಲಿ 4 ವಿಕೆಟ್‌ ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಉರುಳಿಸಿದ ಜೇಸನ್ ಹೋಲ್ಡರ್ ಅವರು ವೆಸ್ಟ್ ಇಂಡೀಸ್‌ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಭಾನುವಾರ ರಾತ್ರಿ ನಡೆದ ಇಂಗ್ಲೆಂಡ್ ಎದುರಿನ ಕೊನೆಯ ಮತ್ತು ಐದನೇ ಟ್ವೆಂಟಿ20 ಪಂದ್ಯದಲ್ಲಿ ತಂಡ 17 ರನ್‌ಗಳಿಂದ ಗೆದ್ದು 3–2ರಲ್ಲಿ ಸಣಿ ತನ್ನದಾಗಿಸಿಕೊಂಡಿತು. ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 179 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಕೊನೆಯ ಓವರ್‌ನಲ್ಲಿ 20 ರನ್‌ ಬೇಕಾಗಿತ್ತು. ಮೊದಲ ಎಸೆತದಲ್ಲಿ ಹೋಲ್ಡರ್ ಎರಡು ರನ್ ನೀಡಿದರು. ನಂತರ ನಾಲ್ಕು ಎಸೆತದಲ್ಲಿ ಕ್ರಿಸ್ ಜೋರ್ಡನ್‌, ಸ್ಯಾಮ್ ಬಿಲಿಂಗ್ಸ್‌, ಆದಿಲ್ ರಶೀದ್ ಮತ್ತು ಸಕೀಬ್ ಮಹಮೂದ್ ಅವರನ್ನು ವಾಪಸ್ ಕಳುಹಿಸಿದರು. ಮೂರನೇ ಕ್ರಮಾಂಕದ ಜೇಮ್ಸ್ ವಿನ್ಸ್ (55; 35 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಸ್ಯಾಮ್ ಬಿಲಿಂಗ್ಸ್ (41; 28 ಎ, 1 ಬೌಂ, 2 ಸಿ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಜಯದತ್ತ ಹೆಜ್ಜೆ ಹಾಕಿತ್ತು. ಕೊನೆಯ ಐವರು ಎರಡಂಕಿ ಮೊತ್ತವನ್ನೂ ದಾಟದೆ ಔಟಾದರು. ಬ್ರೆಂಡನ್ ಕಿಂಗ್ಸ್ ಮತ್ತು ಕೈಲ್ ಮೇಯರ್ಸ್ ಅವರ 59 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ನೆರವಿನಿಂದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಕಂಡಿತ್ತು. ಕೀರನ್ ಪೊಲಾರ್ಡ್ ಮತ್ತು ರೋವ್ಮನ್ ಪೊವೆಲ್ ಕೊನೆಯಲ್ಲಿ ಮಿಂಚಿದರು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್‌: 20 ಓವರ್‌ಗಳಲ್ಲಿ 4ಕ್ಕೆ 179 (ಬ್ರೆಂಡನ್ ಕಿಂಗ್‌ 34, ಕೈಲ್ ಮೇಯರ್ಸ್‌ 31, ನಿಕೋಲಸ್ ಪೂರನ್ 21, ಕೀರನ್ ಪೊಲಾರ್ಡ್‌ ಔಟಾಗದೆ 41, ರೋವ್ಮನ್ ಪೊವೆಲ್ ಔಟಾಗದೆ 35; ಆದಿಲ್ ರಶೀದ್ 17ಕ್ಕೆ2, ಲಿಯಾಮ್ ಲಿವಿಂಗ್‌ಸ್ಟನ್‌ 17ಕ್ಕೆ2); ಇಂಗ್ಲೆಂಡ್‌: 19.5 ಓವರ್‌ಗಳಲ್ಲಿ 162 (ಜೇಮ್ಸ್ ವಿನ್ಸ್ 55, ಸ್ಯಾಮ್ ಬಿಲಿಂಗ್ಸ್‌ 41; ಅಕೀಲ್ ಹೊಸೇನ್ 30ಕ್ಕೆ4, ಜೇಸನ್ ಹೋಲ್ಡರ್‌ 27ಕ್ಕೆ5). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 17 ರನ್‌ಗಳ ಜಯ; 5 ಪಂದ್ಯಗಳ ಸರಣಿಯಲ್ಲಿ 3-2ರ ಗೆಲುವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.