ತಂಡಕ್ಕೆ ಕೊಡುಗೆ ನೀಡಲು ನಾಯಕನೇ ಆಗಬೇಕಿಲ್ಲ: ವಿರಾಟ್‌ ಕೊಹ್ಲಿ ನವದೆಹಲಿ: ತಂಡಕ್ಕೆ ಕೊಡುಗೆ ನೀಡಲು ನಾಯಕನೇ ಆಗಬೇಕೆಂದೇನಿಲ್ಲ. ಬ್ಯಾಟಿಂಗ್ ಮೂಲಕವೂ ಅದನ್ನು ಸಾಧಿಸಬಹುದು ಎಂದು ಭಾರತ ಕ್ರಿಕೆಟ್‌ ತಂಡದ ನಿಕಟಪೂರ್ವ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ 1-2ರ ಸರಣಿ ಸೋಲಿನ ನಂತರ ಭಾರತ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ ಅವರು ಕ್ರಿಕೆಟ್ ಜಗತ್ತನ್ನು ಅಚ್ಚರಿಗೆ ದೂಡಿದ್ದರು. ಇದಕ್ಕೂ ಮೊದಲು ಅವರನ್ನು ಏಕದಿನ ನಾಯಕತ್ವದಿಂದ ಕೈಬಿಡಲಾಗಿತ್ತು. ‘ಫಿರ್ಸೆಸೈಡ್‌ ಚಾಟ್‌ ವಿಥ್ ವಿಕೆ (ವಿರಾಟ್‌ ಕೊಹ್ಲಿ)‘ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ತಂಡದ ಮುಂದಾಳು ಆಗಿಲ್ಲದಿದ್ದರೂ ಕೊಡುಗೆ ನೀಡಲು ಸಾಧ್ಯವಿದೆ ಎಂದಿದ್ದಾರೆ. ‘ಪ್ರತಿಯೊಂದಕ್ಕೂ ಅಧಿಕಾರಾವಧಿ ಎಂಬುದು ಇದೆ. ಅದರ ಬಗ್ಗೆ ತಿಳಿದಿರಬೇಕು. ಜನರು ‘ಈ ವ್ಯಕ್ತಿ ಏನು ಮಾಡಿದ್ದಾರೆ‘ ಎಂದು ಹೇಳಬಹುದು ಆದರೆ ಹೆಚ್ಚಿನದನ್ನು ಸಾಧಿಸಲು ಯೋಚಿಸಿದಾಗ ನೀವು ಮಾಡಿದ ಕೆಲಸ ನಿಮಗೆ ಅರಿವಾಗುತ್ತದೆ‘ ಎಂದು ಅವರು ಮಾರ್ಮಿಕವಾಗಿ ನುಡಿದರು. ‘ಮಹೇಂದ್ರ ಸಿಂಗ್ ಧೋನಿ ಅವರು ತಂಡದಲ್ಲಿದ್ದಾಗ ಒಬ್ಬ ಮುಂದಾಳುವಿನಂತೆ ಇದ್ದರು. ಅವರಿಂದ ನಿರಂತರವಾಗಿ ನಾವು ಸಲಹೆಗಳನ್ನು ಪಡೆಯುತ್ತಿದ್ದೆವು. ಅದು ಸಹಜ ಬೆಳವಣಿಗೆಯಾಗಿತ್ತು‘ ಎಂದು ವಿರಾಟ್‌ ಹೇಳಿದ್ದಾರೆ. ‘ಒಬ್ಬರು ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಸ್ವೀಕರಿಸಬೇಕು. ನಾನು ಧೋನಿ ನಾಯಕತ್ವದಲ್ಲಿ ಆಟಗಾರನಾಗಿ ಆಡಿದ್ದೇನೆ ಮತ್ತು ನಾನು ದೀರ್ಘಕಾಲದವರೆಗೆ ತಂಡದ ನಾಯಕನಾಗಿದ್ದೇನೆ. ನನ್ನ ಮನಸ್ಥಿತಿ ಬದಲಾಗಿಲ್ಲ‘ ಎಂದು ಅವರು ನುಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.