ರಣಜಿ ಟೂರ್ನಿ 16ರಿಂದ; ಬೆಂಗಳೂರಿನಲ್ಲೂ ಪಂದ್ಯ ನವದೆಹಲಿ (ಪಿಟಿಐ): ಎರಡು ವರ್ಷಗಳ ಬಿಡುವಿನ ನಂತರ ನಡೆಯಲಿರುವ ರಣಜಿ ಟೂರ್ನಿಯ ಪಂದ್ಯಗಳು ಫೆಬ್ರುವರಿ 16ರಂದು ಆರಂಭಗೊಳ್ಳಲಿವೆ. ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರ ಬಿಡುಗಡೆ ಮಾಡಿದ್ದು ಮಾರ್ಚ್ ಐದರ ವರೆಗೆ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದೆ.‌ ದೇಶಿ ಕ್ರಿಕೆಟ್‌ನ ರಾಜ ಎಂದೇ ಹೇಳಲಾಗುವ ರಣಜಿ ಟೂರ್ನಿಯ ಈ ಬಾರಿಯ ಪಂದ್ಯಗಳನ್ನು ಜನವರಿ 13ರಂದು ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್–19ರ ಪ್ರಕರಣಗಳು ಹೆಚ್ಚುತ್ತಿದ್ದ ಕಾರಣ ಟೂರ್ನಿಯನ್ನು ಮುಂದೂಡಲು ನಿರ್ಧರಿಸಲಾಗಿತ್ತು. ಹೊಸ ವೇಳಾಪಟ್ಟಿ ಪ್ರಕಾರ ಪಂದ್ಯಗಳು ಬೆಂಗಳೂರು, ಅಹಮದಾಬಾದ್‌, ಕೋಲ್ಕತ್ತ, ತಿರುವನಂತಪುರ, ಕಟಕ್‌, ಚೆನ್ನೈ, ಗುವಾಹಟಿ, ಹೈದರಾಬಾದ್‌ ಮತ್ತು ರಾಜ್‌ಕೋಟ್‌ನಲ್ಲಿ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟೂರ್ನಿಯಲ್ಲಿ 38 ತಂಡಗಳು ಪಾಲ್ಗೊಳ್ಳಲಿವೆ. ತಲಾ ನಾಲ್ಕು ತಂಡಗಳ ಎಂಟು ಗುಂಪುಗಳು ಇರಲಿವೆ. ‍ಪ್ಲೇಟ್ ಗುಂಪಿನಲ್ಲಿ ಆರು ತಂಡಗಳು ಇರಲಿವೆ. ಮೊದಲು ನಿಗದಿ ಮಾಡಿದ ವೇಳಾಪಟ್ಟಿ ಪ್ರಕಾರ ಪ್ರತಿ ತಂಡಕ್ಕೆ ಗುಂಪು ಹಂತದಲ್ಲಿ ಐದು ಪಂದ್ಯಗಳು ಸಿಗುವ ಸಾಧ್ಯತೆ ಇತ್ತು. ಇದನ್ನು ಪರಿಷ್ಕರಿಸಲಾಗಿದ್ದು ಈಗ ಮೂರು ಪಂದ್ಯಗಳನ್ನಷ್ಟೇ ಆಡಲು ಸಾಧ್ಯ. ಫೆಬ್ರುವರಿ 16ರಿಂದ 19ರ ವರೆಗೆ ಮೊದಲ ಸುತ್ತು, 23ರಿಂದ 26ರ ವರೆಗೆ ಎರಡನೇ ಸುತ್ತು ಮತ್ತು ಮಾರ್ಚ್‌ 2ರಿಂದ 5ರ ವರೆಗೆ ಮೂರನೇ ಸುತ್ತಿನ ಪಂದ್ಯಗಳು ನಡೆಯಲಿವೆ. ಫೆಬ್ರುವರಿ ಎರಡನೇ ವಾರದಲ್ಲಿ ತಂಡಗಳು ಬಯೊಬಬಲ್ ಪ್ರವೇಶಿಸಬೇಕಾಗಿದೆ. ಅಹಮದಾಬಾದ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕರ್ನಾಟಕ ತಂಡವು ರೈಲ್ವೇಸ್‌, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಎದುರು ಗುಂಪು ಹಂತದಲ್ಲಿ ಸೆಣಸಲಿದ್ದು ಎಲ್ಲ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.