ಹುಬ್ಬಳ್ಳಿ | ಕ್ರಿಕೆಟ್‌: ಪುನೀತ್ ಶತಕ, ಎಚ್‌ಸಿಎ ಜಯಭೇರಿ ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್‌ಮನ್‌ ಪುನೀತ್‌ ಬಸವ (104) ಶತಕದ ನೆರವಿನಿಂದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 242 ರನ್ ಕಲೆಹಾಕಿತ್ತು. ಈ ಗುರಿಯನ್ನು ಎಚ್‌ಸಿಎ 49.1 ಓವರ್‌ಗಳಲ್ಲಿ ತಲುಪಿತು. ಮಣಿಕಂಠ ಎಸ್‌.ಬಿ., (68) ಅರ್ಧಶತಕ ಕೂಡ ಇದಕ್ಕೆ ಕಾರಣವಾಯಿತು. ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗದುಗಿನ ಜನೋಪಂಥರ್‌ ಕ್ರಿಕೆಟ್‌ ಅಕಾಡೆಮಿ 116 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಈ ತಂಡ ರಿಯಾಜ್‌ ಕೊಟಬಾಳ (116) ಶತಕದಿಂದ 39.4 ಓವರ್‌ಗಳಲ್ಲಿ 281 ರನ್ ಗಳಿಸಿತು. ಎದುರಾಳಿ ಧಾರವಾಡದ ಸಿಸಿಕೆ ’ಬಿ’ ತಂಡ 32.4 ಓವರ್‌ಗಳಲ್ಲಿ 165 ರನ್ ಕಲೆಹಾಕಿ ಆಲೌಟ್‌ ಆಯಿತು. ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿಯ ಟಾಲೆಂಟ್‌ ಕ್ಲಬ್‌ 45 ರನ್‌ಗಳ ಗೆಲುವು ಸಾಧಿಸಿ ನಾಲ್ಕು ಅಂಕಗಳನ್ನು ಪಡೆದುಕೊಂಡಿತು. ಮೊದಲು ಬ್ಯಾಟ್‌ ಮಾಡಿ ಈ ತಂಡ ನೀಡಿದ್ದ 191 ರನ್‌ ಗುರಿ ಎದುರು ಪರದಾಡಿದ ಎದುರಾಳಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಸಿ’ ಕ್ಲಬ್‌ 35.3 ಓವರ್‌ಗಳಲ್ಲಿ 145 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.