ಭಾರತದ ಪ್ರಶಸ್ತಿ ಜಯಕ್ಕೆ ಇನ್ನೊಂದೇ ಹೆಜ್ಜೆ ಒಸ್ಬರ್ನ್ (ಪಿಟಿಐ): ಭಾರತ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿತು. ಬುಧವಾರ ತಡರಾತ್ರಿ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನಾಯಕ ಯಶ್ ಧುಳ್ ಮತ್ತು ಶೇಖ್ ರಶೀದ್ ಅವರ ದ್ವಿಶತಕದ ಆಟವನ್ನು ಬೌಲರ್‌ಗಳು ವ್ಯರ್ಥವಾಗಲು ಬಿಡಲಿಲ್ಲ. ವಿಕಿ ಓಸ್ವಾಲ್ (42ಕ್ಕೆ3) ಮತ್ತು ರವಿಕುಮಾರ್ (37ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಭಾರತ ತಂಡವು 19 ವರ್ಷದೊಳಗಿನವ ವಿಶ್ವಕಪ್ ಸೆಮಿಫೈನಲ್‌ನಲ್ಲಿ 96 ರನ್‌ಗಳಿಂದ ಆಸ್ಟ್ರೇಲಿಯಾ ಎದುರು ಜಯಿಸಿತು. ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 37 ರನ್‌ಗಳಾಗುಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ರಶೀದ್ (94; 108; 8ಬೌಂಡರಿ, 1ಸಿಕ್ಸರ್) ಮತ್ತು ಯಶ್ (110; 110ಎ, 10ಬೌಂಡರಿ, 1ಸಿಕ್ಸರ್) ಮೂರನೇ ವಿಕೆಟ್ ಜೊತೆಯಾಟದಲ್ಲಿ 204 ರನ್‌ಗಳನ್ನು ಸೇರಿಸಿ ಗೆಲುವಿನ ಅವಕಾಶ ಸೃಷ್ಟಿಸಿದರು. ರಶೀದ್ ಮತ್ತು ಯಶ್ ಇಬ್ಬರೂ ಗುಂಪು ಹಂತದಲ್ಲಿ ಐರ್ಲೆಂಡ್ ಎದುರಿನ ಪಂದ್ಯದ ಸಂದರ್ಭದಲ್ಲಿ ಕೋವಿಡ್‌ನಿಂದ ಬಳಲಿದ್ದರು. ಪ್ರತ್ಯೇಕವಾಸ ಮುಗಿಸಿ ತಂಡಕ್ಕೆ ಮರಳಿದ್ದರು. ಅವರೇ ಜಯದ ರೂವಾರಿಗಳಾದರು. ಆದರೆ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಪಡೆಯು ವೈಫಲ್ಯ ಅನುಭವಿಸಿತು. ಆದರೆ, ಲಚ್ಲನ್ ಶಾ (51; 66ಎ) ಅರ್ಧಶತಕ ಬಾರಿಸಿದರು. ಉಳಿದವರಿಂದ ಛಲದ ಆಟ ಮೂಡಿಬರಲಿಲ್ಲ. ಬೌಲರ್‌ಗಳ ಶಿಸ್ತಿನ ದಾಳಿಯೇ ಮೇಲುಗೈ ಸಾಧಿಸಿತು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಆಡಲಿದೆ. ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5ಕ್ಕೆ290 (ಶೇಖ್ ರಶೀದ್ 94, ಯಶ್ ಧುಳ್ 110, ದಿನೇಶ್ ಬಾನಾ ಔಟಾಗದೆ 20, ಜ್ಯಾಕ್ ನಿಸ್ಬೆಟ್ 41ಕ್ಕೆ2, ವಿಲಿಯಂ ಸಾಲ್ಜಮನ್‌ 57ಕ್ಕೆ2) ಆಸ್ಟ್ರೇಲಿಯಾ: 41.5 ಓವರ್‌ಗಳಲ್ಲಿ 194 (ಕ್ಯಾಂಪ್‌ಬೆಲ್ 30, ಕೋರಿ ಮಿಲ್ಲರ್ 38, ಲಚ್ಲನ್ ಶಾ 51, ಜ್ಯಾಕ್ ಸಿಮ್‌ಫೀಲ್ಡ್‌ 20,ರವಿಕುಮಾರ್ 37ಕ್ಕೆ2, ವಿಕಿ ಓಸ್ವಾಲ್ 42ಕ್ಕೆ3, ನಿಶಾಂತ್ ಸಿಂಧು 25ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 96 ರನ್‌ಗಳ ಜಯ. ಫೈನಲ್‌ಗೆ ಪ್ರವೇಶ. ಪಂದ್ಯಶ್ರೇಷ್ಠ: ಯಶ್ ಧುಳ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.