ಅಭ್ಯಾಸ ಆರಂಭಿಸಿದ ರೋಹಿತ್ ಬಳಗ ಅಹಮದಾಬಾದ್‌: ವೆಸ್ಟ್ ಇಂಡೀಸ್ ಎದುರಿನ ಏಕದಿನ ಮತ್ತು ಟ್ವೆಂಟಿ20 ಕ್ರಿಕೆಟ್ ಸರಣಿಗಳಿಗೆ ಸಜ್ಜಾಗುತ್ತಿರುವ ಭಾರತ ತಂಡ ಗುರುವಾರ ಅಭ್ಯಾಸ ಆರಂಭಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೇ ಆರರಂದು ಭಾರತದ ಒಂದು ಸಾವಿರನೇ ಏಕದಿನ ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ. ಬುಧವಾರ ಕೋವಿಡ್‌ ಸೋಂಕು ಕಾಣಿಸಿಕೊಂಡ ಶಿಖರ್ ಧವನ್‌, ಋತುರಾಜ್ ಗಾಯಕವಾಡ್ ಮತ್ತು ಶ್ರೇಯಸ್ ಅಯ್ಯರ್ ಅವರ ಆರ್‌ಟಿ–ಪಿಸಿಆರ್ ವರದಿ ನೆಗೆಟಿವ್ ಬಂದಿರುವುದು ತಂಡದ ಆತಂಕವನ್ನು ದೂರ ಮಾಡಿದೆ. ಆದರೆ ಅವರು ಏಕದಿನ ಸರಣಿಗೆ ಲಭ್ಯ ಇರುವುದಿಲ್ಲ. ಒಂದು ವಾರ ಪ್ರತ್ಯೇಕವಾಸದಲ್ಲಿ ಇರಬೇಕಾದ ಅವರ ಆರ್‌ಟಿ–ಪಿಸಿಆರ್‌ ವರದಿ ನೆಗೆಟಿವ್ ಆದರೆ ಮಾತ್ರ ಟ್ವೆಂಟಿ20 ಸರಣಿಗೆ ಪರಿಗಣಿಸಲಾಗುವುದು. ಮಯಂಕ್ ಅಗರವಾಲ್ ಗುರುವಾರ ತಂಡವನ್ನು ಸೇರಿಕೊಂಡಿದ್ದಾರೆ. ಅವರು ಮೂರು ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಬೇಕಾಗಿರುವ ಕಾರಣ ಪಂದ್ಯಕ್ಕೆ ನೇರವಾಗಿ ಲಭ್ಯ ಇರುತ್ತಾರೆ. ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿದ್ದ ವೇಗದ ಬೌಲರ್ ನವದೀಪ್ ಸೈನಿ ಅವರಲ್ಲೂ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಫೀಲ್ಡಿಂಗ್ ಕೋಚ್ ಟಿ.ದಿಲೀಪ್‌, ಭದ್ರತಾ ಅಧಿಕಾರಿ ಬಿ.ಲೋಕೇಶ್‌ ಮತ್ತು ಸಿಬ್ಬಂದಿ ರಾಜೀವ್‌ ಕುಮಾರ್ ಅವರಿಗೂ ಕೋವಿಡ್ ಇರುವುದು ದೃಢಪಟ್ಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.