ಆಟಗಾರರು ಬರುತ್ತಾರೆ, ಹೋಗುತ್ತಾರೆ; ನಾಯಕ ಯಾವಾಗಲೂ ನಾಯಕನೇ: ಅಜಯ್ ಜಡೇಜಾ ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ಸ್ಥಾನದಿಂದ ಇತ್ತೀಚೆಗಷ್ಟೇ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಅವರೊಬ್ಬ ಲೀಡರ್ (ನಾಯಕ) ಎಂದು ಮಾಜಿ ಆಟಗಾರ ಅಜಯ್ ಜಡೇಜಾ ಶ್ಲಾಘಿಸಿದ್ದಾರೆ.ಆಟಗಾರರು ಮತ್ತು ಆಯ್ಕೆಗಾರರು ಬರುತ್ತಾರೆ, ಹೋಗುತ್ತಾರೆ. ಆದರೆ, ನಾಯಕ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಅವರು ತಂಡದ ನಾಯಕತ್ವದಿಂದ ಕೆಳಗಿಳಿದಿರುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ, ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಆಕ್ರಮಣಕಾರಿ ಶೈಲಿಯಲ್ಲಿಯೇ ಮೈದಾನದಲ್ಲಿ ಕಾಣಿಸಿಕೊಂಡಿರುವುದು ಕ್ರಿಕೆಟ್ ಪ್ರಿಯರ ಮನ ಗೆದ್ದಿದೆ. ಇದೇ ರೀತಿಯ ಆಟವನ್ನು ಕೊಹ್ಲಿ ಮುಂದುವರಿಸಬೇಕು ಎಂದು ಆಶಿಸಿರುವ ಜಡೇಜಾ, ನಾಯಕತ್ವ ತೊರೆದ ಮಾತ್ರಕ್ಕೆ ಅವರು (ಕೊಹ್ಲಿ) ಮೂಲೆಗುಂಪಾಗುವುದಿಲ್ಲ. ಭಾರತ ತಂಡದಲ್ಲಿ ಸ್ಥಾನ ಪಡೆದ ಆರಂಭದ ದಿನಗಳಿಂದಲೂ ಅವರಲ್ಲಿನ ನಾಯಕತ್ವದ ಸಾಮರ್ಥ್ಯವನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕ್ರಿಕ್‌ಬಜ್‌ () ಜೊತೆ ಮಾತನಾಡಿರುವ ಜಡೇಜಾ, ‘ಕ್ರೀಡೆ ಎನ್ನುವುದು ಸಹಜವಾದ ವಿಚಾರ. ನೀವು ಹಲವು ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದೀರಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವಲ್ಲಿನಿರ್ಣಾಯಕ ಪಾತ್ರ ವಹಿಸಿದ್ದೀರಿ. ನೀವು ತಂಡವನ್ನು ಮುನ್ನಡೆಸದೇ ಇದ್ದಾಗಲೂ ಎಂದಿನಂತೆಯೇ ಪ್ರತಿಕ್ರಿಯಿಸಬೇಕಾಗುತ್ತದೆ. ಅವರು (ಕೊಹ್ಲಿ) ನಾಯಕರಾಗಿ ಆಯ್ಕೆಯಾದ ಕೊನೇ ಬೆಂಚ್‌ನವರೇನಲ್ಲ. ನಾಯಕರಾಗಿಲ್ಲದ ಸಂದರ್ಭದಲ್ಲಿಯೂ ಕೊಹ್ಲಿ ನಾಯಕತ್ವದ ಗುಣಗಳನ್ನು ಹೊಂದಿದ್ದರು. 2011ರಲ್ಲಿ ಭಾರತ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಎತ್ತಿಕೊಳ್ಳುವಂತೆ ಯಾರೊಬ್ಬರೂ ವಿರಾಟ್‌ಗೆ ಹೇಳಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: 1st | 1000ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ ಮುಂದುವರಿದು, ‘ಅವರು (ಕೊಹ್ಲಿ) ಯಾವಾಗಲೂ ನಾಯಕರಾಗಿರುತ್ತಾರೆ. ತಮಗೆ ತಾವೇ ತಡೆಯೊಡ್ಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಅನುಮಾನ ನನಗಿದೆ. ಅವರ ಹುರುಪು ಮತ್ತು ಮನಸ್ಥಿತಿಯೇ ಅವರನ್ನು ಯಶಸ್ಸಿನತ್ತ ಮುನ್ನಡೆಸಿದೆ.ಸದ್ಯಬೇರೆಯವರಿಂದ ಆಯ್ಕೆಯಾಗಿರುವ ಐವರು ಈಗ ವಿರಾಟ್ ನಾಯಕನಲ್ಲ ಎಂದು ಭಾವಿಸಿರಬಹುದು. ಆದರೆ, ಆತನ ಗುಣಮಟ್ಟ ಮತ್ತು ಕೌಶಲ ಈಗಲೂ ಹಾಗೆಯೇ ಇದೆ. ಆಟಗಾರರು ಮತ್ತು ಆಯ್ಕೆಗಾರರು ಬರುತ್ತಾರೆ, ಹೋಗುತ್ತಾರೆ. ಆದರೆ, ನಾಯಕ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ‘ ಎಂದು ತಿಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಜಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ಅಂತರದ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿಕೊಂಡಿದೆ. ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್,176 ರನ್ ಗಳಿಸಿ ಆಲೌಟ್ ಆಯಿತು. ಭಾರತ ಈ ಗುರಿಯನ್ನು ಇನ್ನೂ 22 ಓವರ್‌ಗಳಿರುವಂತೆಯೇ ತಲುಪಿತು. ನಾಯಕ ರೋಹಿತ್ ಶರ್ಮಾ ಬಿರುಸಿನ ಅರ್ಧಶತಕ (60) ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ, ಉತ್ತಮ ಜೊತೆಯಾಟವಾಡಿದ ಸೂರ್ಯಕುಮಾರ್ ಯಾದವ್ (34) ಮತ್ತು ದೀಪಕ್ ಹೂಡಾ (26) ಅಜೇಯರಾಗಿ ಉಳಿದು, ಗೆಲುವಿನ ಲೆಕ್ಕ ಚುಕ್ತಾ ಮಾಡಿದರು. ಎರಡು ಮತ್ತು ಮೂರನೇ ಪಂದ್ಯಗಳೂ ಇದೇ ಕ್ರೀಡಾಂಗಣದಲ್ಲಿ ಫೆ.09 ಮತ್ತು ಫೆ.11 ರಂದು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.