ಕೆಎಸ್‌ಸಿಎ 2ನೇ ಡಿವಿಷನ್‌ ಕ್ರಿಕೆಟ್‌: ಆನಂದ ಅಕಾಡೆಮಿಗೆ ಗೆಲುವು ಹುಬ್ಬಳ್ಳಿ: ಬೆಳಗಾವಿಯ ಆನಂದ ಕ್ರಿಕೆಟ್‌ ಅಕಾಡೆಮಿ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 107 ರನ್‌ಗಳ ಗೆಲುವು ಸಾಧಿಸಿತು. ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆನಂದ ತಂಡ 50 ಓವರ್‌ಗಳಲ್ಲಿ 292 ರನ್‌ ಕಲೆಹಾಕಿತ್ತು. ನಾಗೇಂದ್ರ ಪಾಟೀಲ (ಔಟಾಗದೆ 144, 115ಎಸೆತ, 15 ಬೌಂಡರಿ, 5 ಸಿಕ್ಸರ್‌) ಶತಕ ಇದಕ್ಕೆ ಕಾರಣವಾಯಿತು. ಎದುರಾಳಿ ಗದುಗಿನ ಸ್ಪೋರ್ಟ್ಸ್ ಅಕಾಡೆಮಿ ತಂಡ 40.3 ಓವರ್‌ಗಳಲ್ಲಿ 185 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು. ರೈಲ್ವೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ತಂಡ 26 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಈ ತಂಡ 26 ಓವರ್‌ಗಳಲ್ಲಿ 163 ರನ್‌ ಗಳಿಸಿತ್ತು. ಎದುರಾಳಿ ಬೆಳಗಾವಿಯ ಇಂಡಿಯನ್‌ ಬಾಯ್ಸ್‌ ತಂಡ 29.4 ಓವರ್‌ಗಳಲ್ಲಿ 137 ರನ್‌ ಕಲೆಹಾಕಿ ಆಲೌಟ್‌ ಆಯಿತು. ಈ ಗೆಲುವಿನ ಮೂಲಕ ಭಟ್ಕಳದ ತಂಡ ನಾಲ್ಕು ಅಂಕಗಳನ್ನು ಪಡೆದುಕೊಂಡಿತು. ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲ್ಲಿನ ನೀನಾ ಸ್ಪೋರ್ಟ್ಸ್‌ ಕ್ಲಬ್‌ ಎಂಟು ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಮೊದಲು ಬ್ಯಾಟ್ ಮಾಡಿದ ವಿಜಯ ಕ್ರಿಕೆಟ್‌ ಅಕಾಡೆಮಿ 21.2 ಓವರ್‌ಗಳಲ್ಲಿ 113 ರನ್‌ ಗಳಿಸಿತ್ತು. ಸಾಧಾರಣ ಮೊತ್ತದ ಗುರಿಯನ್ನು ನೀನಾ ಕ್ಲಬ್‌ 12.2 ಓವರ್‌ಗಳಲ್ಲಿ ತಲುಪಿತು. ಅಂಗದರಾಜ ಹಿತ್ತಲಮನಿ (51) ಅರ್ಧಶತಕ ತಂಡದ ಗೆಲುವು ಸುಲಭ ಮಾಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.