ಕ್ರಿಕೆಟ್‌: ಮತ್ತೆ ಮಿಂಚಿದ ಚಾಂಡಿಮಲ್ ಗಾಲ್ (ಪಿಟಿಐ): ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ದಿನೇಶ್‌ ಚಾಂಡಿಮಲ್‌ (80, 137ಎ) ಅವರ ಜವಾಬ್ದಾರಿಯುತ ಅಟದ ನೆರವಿನಿಂದ ಶ್ರೀಲಂಕಾ ತಂಡ, ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಮೊತ್ತ ಪೇರಿಸಿದೆ. ಗಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಪಂದ್ಯದ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 315 ರನ್‌ ಗಳಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಲಂಕಾ ತಂಡಕ್ಕೆ ಒಶಾದ ಫೆರ್ನಾಂಡೊ (50) ಮತ್ತು ದಿಮುತ್ ಕರುಣರತ್ನೆ (40) ಮೊದಲ ವಿಕೆಟ್‌ಗೆ 92 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಚಾಂಡಿಮಲ್‌, ಏಂಜೆಲೊ ಮ್ಯಾಥ್ಯೂಸ್ (42) ಹಾಗೂ ಧನಂಜಯ ಡಿಸಿಲ್ವಾ ಪಾಕ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. ಚಾಂಡಿಮಲ್‌ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ್ದರು. ನಿರೋಶನ್‌ ಡಿಕ್ವೆಲಾ ಅಜೇಯ 42 ರನ್‌ಗಳೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್‌ಕಾಯ್ದಿರಿಸಿಕೊಂಡಿದ್ದಾರೆ. ಮ್ಯಾಥ್ಯೂಸ್‌ಗೆ 100ನೇ ಟೆಸ್ಟ್‌: ಲಂಕಾ ತಂಡದ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌ ಅವರಿಗೆ ಇದು 100ನೇ ಟೆಸ್ಟ್‌ ಆಗಿದೆ. ಪಂದ್ಯದ ಆರಂಭಕ್ಕೆ ಮುನ್ನ ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಮ್ಯಾಥ್ಯೂಸ್‌ 2009 ರಲ್ಲಿ ಇದೇ ತಾಣದಲ್ಲಿ ಪಾಕ್‌ ವಿರುದ್ಧವೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌ ಶ್ರೀಲಂಕಾ 6ಕ್ಕೆ 315 (86 ಓವರ್) ಒಶಾದ ಫೆರ್ನಾಂಡೊ 50, ದಿಮುತ್ ಕರುಣರತ್ನೆ 40, ಏಂಜೆಲೊ ಮ್ಯಾಥ್ಯೂಸ್‌ 42, ದಿನೇಶ್‌ ಚಾಂಡಿಮಲ್‌ 80, ಧನಂಜಯ ಡಿಸಿಲ್ವಾ 33, ನಿರೋಶನ್‌ ಡಿಕ್ವೆಲಾ ಬ್ಯಾಟಿಂಗ್ 42, ಮೊಹಮ್ಮದ್‌ ನವಾಜ್‌ 71ಕ್ಕೆ 2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.