ಎಚ್‌ಪಿಎಲ್‌: ನಯಾಕಾಸ್‌ ತಂಡಕ್ಕೆ ಭರ್ಜರಿ ಗೆಲುವು ಹುಬ್ಬಳ್ಳಿ: ಕರಾರುವಾಕ್ಕಾದ ಬೌಲಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ತಲ್ಲಣ ಉಂಟು ಮಾಡಿದ ಹುಬ್ಬಳ್ಳಿ ನಯಾಕಾಸ್‌ ತಂಡ, 19 ವರ್ಷದ ಒಳಗಿನವರ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಹುಬ್ಬಳ್ಳಿ ಅರ್ಖಾ ನೈಟ್ಸ್‌ ತಂಡ 8.1 ಓವರ್‌ಗಳಲ್ಲಿ ಕೇವಲ 44 ರನ್‌ಗೆ ಆಲೌಟ್‌ ಆಯಿತು. ನಯಾಕಾಸ್‌ ತಂಡದ ಶ್ರೇಯಸ್‌ ಗಂಡ್ಲಾ ‍ಆರು ಮತ್ತು ಪುನೀತ್‌ ಬಸವ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಅಲ್ಪ ಮೊತ್ತದ ಗುರಿಯನ್ನು ನಯಾಕಾಸ್‌ 7.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು. ಶ್ರೇಯಸ್‌ ಪಂದ್ಯ ಶ್ರೇಷ್ಠ ಗೌರವ ಪಡೆದರು. ದಿನದ ಮತ್ತೊಂದು ಪಂದ್ಯದಲ್ಲಿ ಸುಗ್ಗಿ ಸ್ಪಾರ್ಟನ್ಸ್‌ ತಂಡ 29 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಈ ತಂಡ ನಿಗದಿತ 30 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತು. ಎದುರಾಳಿ ಧಾರವಾಡದ ಎ.ಬಿ. ವಾರಿಯರ್ಸ್‌ 29.2 ಓವರ್‌ಗಳಲ್ಲಿ 145 ರನ್‌ ಕಲೆಹಾಕಿ ತನ್ನ ಹೋರಾಟ ಮುಗಿಸಿತು. ಸುಗ್ಗಿ ತಂಡದ ಚಿರಾಗ ನಾಯಕ (72) ಬ್ಯಾಟಿಂಗ್‌ನಲ್ಲಿ ಮತ್ತು ಭುವನ ಬಸಿಡೋಣಿ (27ಕ್ಕೆ4) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.