3rd T20: ಸೂರ್ಯಕುಮಾರ್ ಅರ್ಧಶತಕ, ವೆಸ್ಟ್ ಇಂಡೀಸ್‌ಗೆ 185 ರನ್ ಗುರಿ ಕೋಲ್ಕತ್ತ: ವೆಸ್ಟ್ ಇಂಡೀಸ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಬ್ಬರದಅರ್ಧಶತಕದ(65 ರನ್, 31 ಎಸೆತ) ನೆರವಿನಿಂದ5 ವಿಕೆಟ್‌ ನಷ್ಟಕ್ಕೆ 184 ರನ್ ಗಳಿಸಿದೆ. ಈ ಮೂಲಕ ಪ್ರವಾಸಿ ತಂಡಕ್ಕೆ 185 ಗೆಲುವಿನ ಗುರಿ ನೀಡಿದೆ. ಮೊದಲ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ, ಈ ಪಂದ್ಯದಲ್ಲಿ ಕೆಲವು ಪ್ರಯೋಗಗಳೊಂದಿಗೆ ಮೈದಾನಕ್ಕಿಳಿಯಿತು. ಆರಂಭಿಕರಾಗಿ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಕ್ರೀಸಿಗಿಳಿದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ತಂಡದ ಮೊತ್ತ ಕೇವಲ 10 ರನ್ ಆಗಿದ್ದಾಗ ಕೇವಲ 4 ರನ್ ಗಳಿಸಿದ್ದ ಗಾಯಕ್ವಾಡ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಇಶಾನ್ ಜತೆಗೂಡಿದ ಶ್ರೇಯಸ್ ಅಯ್ಯರ್ ಅಬ್ಬರಿಸುವ ಸುಳಿವು ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರುವುದು ಅವರಿಂದಾಗಲಿಲ್ಲ. ಈ ಜೋಡಿ 2ನೇ ವಿಕೆಟ್‌ಗೆ 53 ರನ್ ಕಲೆಹಾಕಿದರು. ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕ ಇಶಾನ್ ಕಿಶನ್ 31 ಎಸೆತ ಎದುರಿಸಿ 34 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 25 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ನಾಯಕ ರೋಹಿತ್ ಶರ್ಮಾ ಕೂಡ 15 ಬಾಲ್ ಎದುರಿಸಿ ಕೇವಲ 7 ರನ್ ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಸೂರ್ಯಕುಮಾರ್ ಯಾದವ್ ಚುರುಕಿನ ಬ್ಯಾಟಿಂಗ್ ಮೂಲಕ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ವೆಂಕಟೇಶ್ ಅಯ್ಯರ್ (ಔಟಾಗದೆ 35 ರನ್, 19 ಎಸೆತ) ಅಬ್ಬರದ ಬ್ಯಾಟಿಂಗ್ ಮೂಲಕಸೂರ್ಯಕುಮಾರ್‌ಗೆ ಉತ್ತಮ ಸಾಥ್ ನೀಡಿದರು. ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 1, ರಾಸ್ಟನ್ ಚೇಸ್ 1,ಹೇಡನ್ ವಾಲ್ಶ್‌ 1, ಡಾಮ್ನಿಕ್ ಡ್ರೇಕ್ಸ್ 1,ರೊಮಾರಿಯಾ ಶೇಫರ್ಡ್ 1 ವಿಕೆಟ್ ಪಡೆದರು. ಟೀಮ್ ಇಂಡಿಯಾದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದ್ದು, ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆವೇಶ್ ಖಾನ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು, ಚೊಚ್ಚಲ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿಗೆ 10 ದಿನ ವಿಶ್ರಾಂತಿ: ಶ್ರೀಲಂಕಾ ವಿರುದ್ಧದ ಟಿ–20 ಸರಣಿಗೂ ಅಲಭ್ಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.