ರಣಜಿ ಟ್ರೋಫಿ ಕ್ರಿಕೆಟ್ | ಡ್ರಾ ಪಂದ್ಯದಲ್ಲಿ ಕರ್ನಾಟಕ: ಮಯಂಕ್, ಸಮರ್ಥ್ ಅರ್ಧಶತಕ ಚೆನ್ನೈ: ಎರಡು ವರ್ಷಗಳ ನಂತರ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸುವ ಕರ್ನಾಟಕ ತಂಡದ ಗೆಲುವಿನ ಆಸೆ ಈಡೇರಲಿಲ್ಲ. ಎಲೀಟ್ ಸಿ ಗುಂಪಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ರೈಲ್ವೆಸ್ ಯಶಸ್ವಿಯಾಯಿತು. ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ ಸಮಾಧಾನ ಲಭಿಸಿತು. ಭಾನುವಾರ ಮಧ್ಯಾಹ್ನ ಎರಡನೇ ಇನಿಂಗ್ಸ್‌ನಲ್ಲಿ 63.2 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 223 ರನ್ ಗಳಿಸಿದ್ದ ಕರ್ನಾಟಕ ತಂಡವು ಡಿಕ್ಲೇರ್ ಮಾಡಿಕೊಂಡಿತು. 276 ರನ್‌ಗಳ ಗುರಿಯನ್ನು ರೈಲ್ವೆಸ್‌ ತಂಡಕ್ಕೊಡ್ಡಿತು. ಪಂದ್ಯ ಮುಕ್ತಾಯದೊಳಗೆ ಈ ಗುರಿ ತಲುಪುವುದು ಕಠಿಣ ಕಾರ್ಯವೆಂಬ ಅರಿವಿದ್ದ ರೈಲ್ವೆಸ್ ಯಾವುದೇ ಅವಸರವಿಲ್ಲದೇ ಬ್ಯಾಟಿಂಗ್ ಮಾಡಿತು. 33 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 69 ರನ್ ಗಳಿಸಿ ಇನಿಂಗ್ಸ್ ಮುಗಿಸಿತು. ಆರಂಭಿಕ ಜೋಡಿ ಮೃಣಾಲ್ ದೇವಧರ್(20; 38ಎ) ಮತ್ತು ವಿವೇಕ್ ಸಿಂಗ್ (18; 82ಎ) ತಾಳ್ಮೆಯಿಂದ ಆಡಿದರು. ಕರ್ನಾಟಕದ ಬೌಲರ್‌ಗಳನ್ನು ಕಾಡಿದರು.11ನೇ ಓವರ್‌ನಲ್ಲಿ ದೇವಧರ್ ವಿಕೆಟ್ ಗಳಿಸಿದ ವಿಜಯಕುಮಾರ್ ವೈಶಾಖ್ ಜೊತೆಯಾಟ ಮುರಿದರು. ಮುಂದಿನ ಐದು ಓವರ್‌ಗಳ ಅಂತರದಲ್ಲಿ ಶಿವಂ ಚೌಧರಿ ವಿಕೆಟ್‌ ಅನ್ನು ಗಳಿಸಿದ ಆಫ್‌ಸ್ಪಿನ್ನರ್ ಕೆ. ಗೌತಮ್ ಮತ್ತು ಅರಿಂದಮ್ ಘೋಷ್ ವಿಕೆಟ್‌ ಅನ್ನು ವೈಶಾಖ್ ಗಳಿಸಿದರು. ಈ ಹಂತದಲ್ಲಿ ರೈಲ್ವೆಸ್ ಬ್ಯಾಟಿಂಗ್ ಪಡೆಯನ್ನು ಬೇಗನೆ ಉರುಳಿಸಿ ಗೆಲುವು ಸಾಧಿಸುವ ನಿರೀಕ್ಷೆ ಕರ್ನಾಟಕ ತಂಡದಲ್ಲಿ ಮೂಡಿತ್ತು. ಆದರೆ, ಇದಕ್ಕೆ ಮೊಹಮ್ಮದ್ ಸೈಫ್ (ಔಟಾಗದೆ 27) ಅಡ್ಡಗಾಲು ಹಾಕಿದರು. 59 ಎಸೆತಗಳಲ್ಲಿ 27 ರನ್ ಗಳಿಸಿದ ಅವರು ಬೌಲರ್‌ಗಳ ಆಸೆಗೆ ತಣ್ಣೀರೆರಚಿದರು. ಅವರ ವಿವೇಕ್ ಸಿಂಗ್ ಜೊತೆಗೆ ನಾಲ್ಕನೇ ವಿಕೆಟ್‌ನಲ್ಲಿ 40 ರನ್‌ಗಳನ್ನು ಗಳಿಸಿದರು.ಮಯಂಕ್‌, ಸಮರ್ಥ್ ಅರ್ಧಶತಕ ಕರ್ನಾಟಕ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಮಯಂಕ್ ಅಗರವಾಲ್ (56; 93ಎ) ಮತ್ತು ಆರ್. ಸಮರ್ಥ್ (83; 170ಎ) ಅರ್ಧಶತಕ ಗಳಿಸಿ ಆಸರೆ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 53 ರನ್‌ಗಳ ಅಲ್ಪ ಮುನ್ನಡೆ ಗಳಿಸುವಲ್ಲಿ ತಂಡವು ಯಶಸ್ವಿಯಾಗಿತ್ತು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಲಭಿಸಲಿಲ್ಲ. ದೇವದತ್ತ ಪಡಿಕ್ಕಲ್ (4) ಬೇಗನೆ ಔಟಾದರು. ಆದರೆ, ಮಯಂಕ್ ಮತ್ತು ಸಮರ್ಥ್ ಜೋಡಿಯು ಎರಡನೇ ವಿಕೆಟ್‌ಗೆ 105 ರನ್‌ಗಳನ್ನು ಸೇರಿಸಿತು. ಇದರಿಂದಾಗಿ ಕೊನೆಯ ದಿನದಾಟದ ಬೆಳಗಿನ ಅವಧಿಯಲ್ಲಿ ರೈಲ್ವೆಸ್‌ ಬೌಲರ್‌ಗಳಿಗೆ ಹೆಚ್ಚು ಯಶಸ್ಸು ಲಭಿಸಲಿಲ್ಲ. ಇಬ್ಬರೂ ಬ್ಯಾಟರ್‌ಗಳ ಆಕರ್ಷಕ ಹೊಡೆತಗಳು ಗಮನ ಸೆಳೆದವು. 35ನೇ ಓವರ್‌ನಲ್ಲಿ ಮಯಂಕ್ ವಿಕೆಟ್ ಗಳಿಸುವಲ್ಲಿ ಅವಿನಾಶ್ ಯಾದವ್ ಯಶಸ್ವಿಯಾದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ಸಿದ್ಧಾರ್ಥ್ ಅವರು ಸಮರ್ಥ್ ಜೊತೆಗೂಡಿದರು. ಇವರಿಬ್ಬರೂ ಮೂರನೇ ವಿಕೆಟ್‌ಗೆ 62 ರನ್‌ಗಳನ್ನು ಸೇರಿಸಿದರು. ನಾಲ್ಕು ಓವರ್‌ಗಳ ಅಂತರದಲ್ಲಿ ಸಿದ್ಧಾರ್ಥ್ ಮತ್ತು ಸಮರ್ಥ್ ಇಬ್ಬರೂ ಔಟಾದರು. ಸಮರ್ಥ್ 17 ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು.ನಾಯಕ ಮನೀಷ್ ಪಾಂಡೆ (ಔಟಾಗದೇ 24) ತಂಡವು ಇನ್ನೂರರ ಗಡಿ ದಾಟಲು ಕಾರಣರಾದರು. ಪೂಜಾರ 91; ಡ್ರಾ ಪಂದ್ಯದಲ್ಲಿ ಸೌರಾಷ್ಟ್ರ ಅಹಮದಾಬಾದ್ (ಪಿಟಿಐ): ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಚೇತೇಶ್ವರ್ ಪೂಜಾರ ರಣಜಿ ಟೂರ್ನಿಯಲ್ಲಿ ತಮ್ಮ ಲಯ ಕಂಡುಕೊಳ್ಳುವಲ್ಲಿ ಸಫಲರಾದರು.ಡಿ ಗುಂಪಿನಲ್ಲಿ ನಡೆದ ಮುಂಬೈ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ 91 ರನ್ ಗಳಿಸುವಲ್ಲಿ ಯಶಸ್ವಿಯಾದರು. ಆದರೆ, ಮುಂಬೈ ತಂಡವು ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸುವೊಂದರೊಂದಿಗೆ ಪಂದ್ಯ ಡ್ರಾ ಆಯಿತು.ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಮುಂಬೈನ ಅಜಿಂಕ್ಯ ರಹಾನೆ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು. ತಂಡವು 7 ವಿಕೆಟ್ ನಷ್ಟಕ್ಕೆ 544 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಸೌರಾಷ್ಟ್ರ 220 ರನ್‌ಗಳಿಗೆ ಆಲೌಟ್ ಆಗಿ, ಫಾಲೋ ಆನ್ ಪಡೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 372 ರನ್ ಗಳಿಸಿತು. ಪೂಜಾರ ಮತ್ತು ಸ್ನೆಲ್ ಪಟೇಲ್ (98) ಮತ್ತು ಹರ್ಮಿತ್ ದೇಸಾಯಿ (62) ತಂಡದ ಸೋಲು ತಪ್ಪಿಸುವಲ್ಲಿ ಯಶಸ್ವಿಯಾದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 157 ಓವರ್‌ಗಳಲ್ಲಿ 7ಕ್ಕೆ 544 ಡಿಕ್ಲೆರ್ಡ್‌, ಸೌರಾಷ್ಟ್ರ: 64.3 ಓವರ್‌ಗಳಲ್ಲಿ 220, ಎರಡನೇ ಇನಿಂಗ್ಸ್ (ಫಾಲೋ ಆನ್) ಸೌರಾಷ್ಟ್ರ: 116 ಓವರ್‌ಗಳಲ್ಲಿ 9ಕ್ಕೆ 372 (ಹರ್ಮಿತ್ ದೇಸಾಯಿ 62, ಸ್ನೆಲ್ ಪಟೇಲ್ 98, ಚೇತೇಶ್ವರ್ ಪೂಜಾರ 91, ಶಂಸ್ ಮಲಾನಿ 114ಕ್ಕೆ7) ಫಲಿತಾಂಶ: ಪಂದ್ಯ ಡ್ರಾ. 2ನೇ ಇನಿಂಗ್ಸ್‌ನಲ್ಲೂ ಯಶ್ ಧೂಳ್ ಶತಕ ಗುವಾಹಟಿ (ಪಿಟಿಐ): 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧೂಳ್ ಪ್ರಥಮ ದರ್ಜೆ ಕ್ರಿಕೆಟ್‌ನ ಪದಾರ್ಪಣೆಯ ಲ್ಲಿಯೇ ದಾಖಲೆ ಬರೆದರು. ಎಚ್‌ ಗುಂಪಿನಲ್ಲಿ ನಡೆದ ತಮಿಳುನಾಡು ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿಯೂ ಮೂರಂಕಿ ಮೊತ್ತ ಗಳಿಸಿದರು. ಪಂದ್ಯವು ಡ್ರಾ ಆಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದೆಹಲಿ: 452, ತಮಿಳುನಾಡು: 494, ಎರಡನೇ ಇನಿಂಗ್ಸ್: ದೆಹಲಿ: 60.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 228 (ಯಶ್ ಧೂಳ್ ಔಟಾಗದೆ 113, ಧ್ರುವ್ ಶೋರೆ ಔಟಾಗದೆ 107) ಫಲಿತಾಂಶ: ಡ್ರಾ. ಜಮ್ಮು–ಕಾಶ್ಮೀರ ಜಯಭೇರಿ ಚೆನ್ನೈ: ಜಮ್ಮು ಮತ್ತು ಕಾಶ್ಮೀರ ತಂಡವು ಎಲೀಟ್ ಸಿ ಗುಂಪಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಪುದುಚೇರಿ ವಿರುದ್ಧ ಜಯಿಸಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪುದುಚೇರಿ: 343, ಜಮ್ಮು–ಕಾಶ್ಮೀರ: 426, ಎರಡನೇ ಇನಿಂಗ್ಸ್: ಪುದುಚೇರಿ: 124, ಜಮ್ಮು–ಕಾಶ್ಮೀರ: 12.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 45 (ಶುಭಂ ಪಂಡೀರ ಔಟಾಗದೆ 21, ಸಾಗರ್ ಉದೇಶಿ 18ಕ್ಕೆ2) ಫಲಿತಾಂಶ: ಜಮ್ಮು–ಕಾಶ್ಮೀರ ತಂಡಕ್ಕೆ 8 ವಿಕೆಟ್‌ಗಳ ಜಯ. ಎ ಗುಂಪು: ಮೊದಲ ಇನಿಂಗ್ಸ್:ಮೇಘಾಲಯ 40.5 ಓವರ್‌ಗಳಲ್ಲಿ 148, ಕೇರಳ: 140.4 ಓವರ್‌ಗಳಲ್ಲಿ 9ಕ್ಕೆ 505, ಎರಡನೇ ಇನಿಂಗ್ಸ್: ಮೇಘಾಲಯ: 53.5 ಓವರ್‌ಗಳಲ್ಲಿ 191 (ಚಿರಾಜ್ ಖುರಾನ 75, ದೀಪು ಸಂಗ್ಮಾ ಔಟಾಗದೆ 55, ಬಾಸಿಲ್ ಥಂಪಿ 43ಕ್ಕೆ4, ಜಲಜ್ ಸಕ್ಸೆನಾ 28ಕ್ಲೆ3) ಫಲಿತಾಂಶ: ಕೇರಳ ತಂಡಕ್ಕೆ ಇನಿಂಗ್ಸ್ ಮತ್ತು 166 ರನ್‌ಗಳ ಜಯ. ಮಧ್ಯಪ್ರದೇಶ: 274, ಗುಜರಾತ್ 331, ಮಧ್ಯಪ್ರದೇಶ: 78 ಓವರ್‌ಗಳಲ್ಲಿ 251 (ಶುಭಂ ಶರ್ಮಾ 103, ಚೇತನ್ ಗಜಾ 48ಕ್ಕೆ6), ಗುಜರಾತ್: 37.5 ಓವರ್‌ಗಳಲ್ಲಿ 88 (ಕರಣ್ ಪಟೇಲ್ 27, ಕುಮಾರ್ ಕಾರ್ತಿಕೆಯ 34ಕ್ಕೆ5, ಈಶ್ವರ್ ಪಾಂಡೆ 28ಕ್ಕೆ2, ಶುಭಂ ಶ್ಯಾಮಸುಂದರ್ ಶರ್ಮಾ 7ಕ್ಕೆ2) ಫಲಿತಾಂಶ: ಮಧ್ಯಪ್ರದೇಶಕ್ಕೆ 106 ರನ್‌ಗಳ ಜಯ. ಇ ಗುಂಪು: ಸರ್ವಿಸಸ್‌: 176, ಉತ್ತರಾಖಂಡ: 248, ಸರ್ವಿಸಸ್: 204, ಉತ್ತರಾಖಂಡ: 28.3 ಓವರ್‌ಗಳಲ್ಲಿ 1 ವಿಕೆಟ್‌ಗೆ 136 (ಜೈ ಗೋಕುಲ್ ಬಿಸ್ತ್ ಔಟಾಗದೆ 87, ಕಮಲ್ ಸಿಂಗ್ 23, ಕುನಾಲ್ ಚಾಂಡೇಲಾ ಔಟಾಗದೆ 25) ಫಲಿತಾಂಶ: ಉತ್ತರಾಖಂಡಕ್ಕೆ 9 ವಿಕೆಟ್‌ಗಳ ಜಯ. ರಾಜಸ್ಥಾನ: 275, ಆಂಧ್ರಪ್ರದೇಶ: 224, ರಾಜಸ್ಥಾನ: 316, ಆಂಧ್ರಪ್ರದೇಶ: 53.3 ಓವರ್‌ಗಳಲ್ಲಿ 209 (ರಿಕಿ ಭುಯ್ 39, ಯಾರಾ ಸಂದೀಪ್ 43, ಪಿನ್ನಿತಿ ತಪಸ್ವಿ 44, ಮನೀಷ್ ಗೊಲ್ಮಾರು 29, ಅಂಕಿತ್ ಚೌಧರಿ 50ಕ್ಕೆ3, ಶುಭಂ ಶರ್ಮಾ 32ಕ್ಕೆ4, ತನ್ವೀರ್ ಉಲ್ ಹಕ್ 62ಕ್ಕೆ2) ಫಲಿತಾಂಶ: ರಾಜಸ್ಥಾನಕ್ಕೆ 158 ರನ್‌ಗಳ ಜಯ. ಎಫ್‌ ಗುಂಪು: ಹರಿಯಾಣ: 556, ತ್ರಿಪುರ: 436, ಹರಿಯಾಣ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 81 (ಶುಭಂ ರೊಹಿಲಾ ಔಟಾಗದೆ 50, ಯುವರಾಜ್ ಸಿಂಗ್ 28, ರಾಹಿಲ್ ಶಾ 29ಕ್ಕೆ1) ಫಲಿತಾಂಶ: ಪಂದ್ಯ ಡ್ರಾ. ಜಿ ಗುಂಪು: ಮಹಾರಾಷ್ಟ್ರ 415, ಅಸ್ಸಾಂ 248, ಅಸ್ಸಾಂ ಫಾಲೋ ಆನ್: 73 ಓವರ್‌ಗಳಲ್ಲಿ 160 (ರಿಯಾನ್ ಪರಾಗ್ 56, ಸ್ವರೂಪಂ ಪುರಕಾಯಸ್ಥ 38, ಸತ್ಯಜೀತ್ ಬಚಾವ್ 45ಕ್ಕೆ7, ಮನೋಜ್ ಇಂಗಳೆ 29ಕ್ಕೆ2) ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ ಇನಿಂಗ್ಸ್ ಮತ್ತು 7 ರನ್‌ಗಳ ಜಯ. ಎಚ್ ಗುಂಪು: ಜಾರ್ಖಂಡ್: 169, ಛತ್ತೀಸಗಡ: 174, ಜಾರ್ಖಂಡ್133, ಛತ್ತೀಸಗಡ: 25.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 129 (ಅಖಿಲ್ ಹೆರ್ವಾಡಕರ್ ಔಟಾಗದೆ 62, ಅಜಯ್ ಜಾಧವ್ ಮಂಡಲ್ ಔಟಾಗದೆ 37) ಫಲಿತಾಂಶ:ಛತ್ತೀಸಗಡಕ್ಕೆ 8 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.