ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಹೋರಾಡಿದ ರೈಲ್ವೇಸ್ ಪಡೆ; ಕರ್ನಾಟಕಕ್ಕೆ ಮುನ್ನಡೆ ಚೆನ್ನೈ: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ದಿಟ್ಟ ಹೋರಾಟದ ಪರಿಣಾಮ ರೈಲ್ವೇಸ್ ತಂಡ ಸಮಾಧಾನಕರ ಮೊತ್ತ ಕಲೆ ಹಾಕಿತು. ಆದರೆ ಮೊದಲ ಇನಿಂಗ್ಸ್ ಮುನ್ನಡೆಯ ಲಾಭ ಕರ್ನಾಟಕಕ್ಕೆ ಲಭಿಸಿತು. ಇಲ್ಲಿನ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಎಲೀಟ್ ’ಸಿ‘ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತವಾದ 481 ರನ್‌ಗಳಿಗೆ ಉತ್ತರಿಸಿದ ರೈಲ್ವೇಸ್ 426 ರನ್ ಗಳಿಸಿತು. 55 ರನ್‌ಗಳ ಮುನ್ನಡೆ ಗಳಿಸಿದ ಕರ್ನಾಟಕ ಮೂರನೇ ದಿನವಾದ ಶನಿವಾರದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 63 ರನ್ ಕಲೆ ಹಾಕಿದೆ. ಈ ಮೂಲಕ ಒಟ್ಟಾರೆ 118 ರನ್‌ಗಳ ಮುನ್ನಡೆ ಗಳಿಸಿದೆ. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಎರಡನೇ ದಿನದಾಟದ ಶುಕ್ರವಾರ 3 ವಿಕೆಟ್‌ಗಳಿಗೆ 213 ರನ್ ಗಳಿಸಿದ್ದ ರೈಲ್ವೇಸ್‌ ಇನಿಂಗ್ಸ್‌ಗೆ ಅರಿಂದಂ ಘೋಷ್ ಮತ್ತು ಮೊಹಮ್ಮದ್ ಸೈಫ್ ಶನಿವಾರ ಮತ್ತಷ್ಟು ಬಲ ತುಂಬಿದರು. ಶುಕ್ರವಾರ 78 ರನ್ ಗಳಿಸಿದ್ದ ಅರಿಂದಂ ಮೋಹಕ ಬ್ಯಾಟಿಂಗ್ ಮುಂದುವರಿಸಿ ಶತಕ ಪೂರೈಸಿದರು. ಎಂಟು ರನ್‌ಗಳೊಂದಿಗೆ ಶುಕ್ರವಾರ ಕ್ರೀಸ್‌ನಲ್ಲಿದ್ದ ಸೈಫ್ 84 ರನ್‌ಗಳೊಂದಿಗೆ ಮಿಂಚಿದರು. ಇವರಿಬ್ಬರು 94 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು 300 ರನ್‌ಗಳ ಸನಿಹ ತಲುಪಿಸಿದರು. ಅರಿಂದಂ ಅವರು ಶ್ರೇಯಸ್ ಗೋಪಾಲ್‌ಗೂ ಮೊಹಮ್ಮದ್ ಸೈಫ್ ಅವರು ಕೃಷ್ಣಪ್ಪ ಗೌತಮ್‌ಗೂ ವಿಕೆಟ್ ಒಪ್ಪಿಸಿದರು. ಉಪೇಂದ್ರ ಯಾದವ್ ಮತ್ತು ಕರಣ್ ಶರ್ಮಾ ಅವರ ವಿಕೆಟ್ ಕಬಳಿಸಿ ವಿದ್ಯಾಧರ ಪಾಟೀಲ ನಿರೀಕ್ಷೆ ಮೂಡಿಸಿದರು. ಆದರೆ ಮಧ್ಯಮ ವೇಗಿ ಯುವರಾಜ್ ಸಿಂಗ್ ಮತ್ತು ಎಡಗೈ ಸ್ಪಿನ್ನರ್‌ ಅವಿನಾಶ್ ಯಾದವ್ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರ ನಡುವಿನ 60 ರನ್‌ಗಳ ಜೊತೆಯಾಟವು ರೈಲ್ವೇಸ್ ಮೊತ್ತ 400 ರನ್‌ಗಳ ಗಡಿ ದಾಟಲು ನೆರವಾಯಿತು. ದೇವದತ್ತ ಪಡಿಕ್ಕಲ್ ವೈಫಲ್ಯ ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕ ಆರಂಭದಲ್ಲೇ ಆಘಾತ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ 21 ರನ್‌ ಗಳಿಸಿದ್ದ ದೇವದತ್ತ ಪಡಿಕ್ಕಲ್ ಮತ್ತೊಮ್ಮೆ ವೈಫಲ್ಯ ಕಂಡರು. ಐದನೇ ಓವರ್‌ನಲ್ಲಿ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಪಡಿಕ್ಕಲ್ ವಿಕೆಟ್ ಉರುಳಿಸಿದರು. ಆದರೆ ಮಯಂಕ್ ಅಗರವಾಲ್ ಮತ್ತು ಆರ್‌.ಸಮರ್ಥ್ ಎಚ್ಚರಿಕೆಯ ಆಟವಾಡಿ ವಿಕೆಟ್ ಕಳೆದುಕೊಳ್ಳದಂತೆ ಇನಿಂಗ್ಸ್ ಮುನ್ನಡೆಸಿದರು. ಅರ್ಧಶತಕದ ಜೊತೆಯಾಟವಾಡಿದರು. ಸ್ಕೋರ್ ಕಾರ್ಡ್‌ ಕರ್ನಾಟಕ, ಮೊದಲ ಇನಿಂಗ್ಸ್‌ 481 (109.3 ಓವರ್‌) ರೈಲ್ವೇಸ್‌, ಮೊದಲ ಇನಿಂಗ್ಸ್‌ 426 (128.3 ಓವರ್‌) (ಶುಕ್ರವಾರ 65 ಓವರ್‌ಗಳಲ್ಲಿ 3ಕ್ಕೆ213) ಅರಿಂದಂ ಎಲ್‌ಬಿಡಬ್ಲ್ಯು ಶ್ರೇಯಸ್ 105 (197 ಎ, 4x12, 6x3), ಸೈಫ್‌ ಸ್ಟಂಪ್ಡ್ ಶರತ್‌ ಬಿ ಗೌತಮ್ 84 (148 ಎ, 4x11, 6x1), ಉಪೇಂದ್ರ ಸಿ ಸಿದ್ಧಾರ್ಥ್‌ ಬಿ ವಿದ್ಯಾಧರ್ 12 (18 ಎ, 4x2), ಕರಣ್ ಶರ್ಮಾ ಸಿ ಶರತ್‌ ಬಿ ವಿದ್ಯಾಧರ್‌ 8 (11 ಎ, 4x1), ಯುವರಾಜ್ ಸಿಂಗ್ ಸಿ ಶರತ್ ಬಿ ರೋನಿತ್ 48 (68 ಎ, 4x7, 6x1), ಅವಿನಾಶ್‌ ಯಾದವ್ ಸಿ ದೇವದತ್ತ ಬಿ ರೋನಿತ್ 22 (47 ಎ, 4x4), ಅಮಿತ್ ಔಟಾಗದೆ 4 (14 ಎ), ಹಿಮಾಂಶು ಸಾಂಗ್ವಾನ್ ಸಿ ಶರತ್ ಬಿ ರೋನಿತ್ 2 (11 ಎ) ಇತರೆ (ಬೈ 4, ಲೆಗ್‌ಬೈ 11, ನೋಬಾಲ್‌ 3, ವೈಡ್‌ 2) 20 ವಿಕೆಟ್ ಪತನ 4-294 (ಅರಿಂದಂ ಘೋಷ್, 93.5), 5-323 (ಉಪೇಂದ್ರ ಯಾದವ್‌, 100.3), 6-329 (ಕರಣ್ ಶರ್ಮಾ, 102.2), 7-359 (ಮೊಹಮ್ಮದ್ ಸೈಫ್‌, 109.2), 8-419 (ಯುವರಾಜ್ ಸಿಂಗ್‌, 122.5), 9-420 (ಅವಿನಾಶ್‌ ಯಾದವ್, 124.6), 10-426 (ಹಿಮಾಂಶು ಸಾಂಗ್ವಾನ್, 128.3) ಬೌಲಿಂಗ್ ವೈಶಾಖ್ ವಿಜಯಕುಮಾರ್ 22–4–72–0, ವಿದ್ಯಾಧರ್ ಪಾಟೀಲ್ 18–1–77–2, ಕೃಷ್ಣಪ್ಪ ಗೌತಮ್ 41–10–127–4, ರೋನಿತ್ ಮೋರೆ 27.3–9–67–3, ಶ್ರೇಯಸ್ ಗೋಪಾಲ್ 20–1–68–1 ಕರ್ನಾಟಕ ಎರಡನೇ ಇನಿಂಗ್ಸ್ 1ಕ್ಕೆ 63 (17 ಓವರ್‌) ಮಯಂಕ್ ಬ್ಯಾಟಿಂಗ್ 39 (53 ಎ, 4x5, 6x1), ದೇವದತ್ತ ಬಿ ಅಮಿತ್ 4 (8 ಎ), ಸಮರ್ಥ್ ಬ್ಯಾಟಿಂಗ್ 20 (41 ಎ, 4x2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.