ಭಾರತ–ವೆಸ್ಟ್ ಇಂಡೀಸ್ ಟ್ವೆಂಟಿ20 ಸರಣಿಯ ಎರಡನೇ ಪಂದ್ಯ: ಕೊಹ್ಲಿ ಮೇಲೆ ಕಣ್ಣು ಕೋಲ್ಕತ್ತ: ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದು ಅಧಿಕಾರಯುತ ಜಯ ಸಾಧಿಸಿರುವ ಭಾರತ ತಂಡ ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಜಯದ ಭರವಸೆಯಲ್ಲಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಆರು ವಿಕೆಟ್‌ಗಳ ಜಯ ಸಾಧಿಸಿತ್ತು. ಬೌಲಿಂಗ್‌ನಲ್ಲಿ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಗಮನಾರ್ಹ ಸಾಧನೆ ಮಾಡಿದ್ದರೆ ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮಿಂಚಿದ್ದರು. ಆದರೆ ವಿರಾಟ್ ಕೊಹ್ಲಿ ನಿರೀಕ್ಷೆ ಹುಸಿಗೊಳಿಸಿದ್ದರು. ಆದ್ದರಿಂದ ಎರಡನೇ ಪಂದ್ಯದಲ್ಲಿ ಎಲ್ಲರ ಚಿತ್ತ ಅವರತ್ತ ನೆಟ್ಟಿದೆ. ಅಹಮದಾಬಾದ್‌ನಲ್ಲಿ ನಡೆದ ಏಕದಿನ ಸರಣಿಯನ್ನು 0–3ರಲ್ಲಿ ಕಳೆದುಕೊಂಡಿರುವ ಕೀರನ್ ಪೊಲಾರ್ಡ್ ಬಳಗ ತಮ್ಮ ನೆಚ್ಚಿನ ಟ್ವೆಂಟಿ20 ಕ್ರಿಕೆಟ್‌ನಲ್ಲಿ ತಿರುಗೇಟು ನೀಡುವ ಉತ್ಸಾಹದಲ್ಲಿ ಇಲ್ಲಿಗೆ ಬಂದಿಳಿದಿತ್ತು. ಆದರೆ ಪಂದ್ಯದ ಯಾವ ಹಂತದಲ್ಲೂ ಭಾರತಕ್ಕೆ ಸವಾಲೊಡ್ಡಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ಎರಡನೇ ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿ ತನ್ನದಾಗಿಸಿಕೊಳ್ಳಲಿದೆ. ಇದು ಸಾಧ್ಯವಾದರೆ, ಪೂರ್ಣಪ್ರಮಾಣದ ನಾಯಕನಾದ ಬಳಿಕ ರೋಹಿತ್ ಶರ್ಮಾ ಗೆದ್ದ ಸತತ ಮೂರನೇ ಸರಣಿ ಇದಾಗಲಿದೆ. ಬೌಲಿಂಗ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ಅವಕಾಶ ಕೊಟ್ಟು ಮೊದಲ ಪಂದ್ಯದಲ್ಲಿ ಆರು ಮಂದಿ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದ ಭಾರತ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿತ್ತು. ಇದೇ ತಂತ್ರದೊಂದಿಗೆ ಎರಡನೇ ಪಂದ್ಯದಲ್ಲೂ ಕಣಕ್ಕೆ ಇಳಿದರೆ ಶ್ರೇಯಸ್ ಮತ್ತೊಮ್ಮೆ ಬೆಂಚು ಕಾಯಬೇಕಾದೀತು. ದೀಪಕ್ ಚಾಹರ್‌ ಆಡುವುದು ಸಂದೇಹ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬಲಗೈಗೆ ಗಾಯಗೊಂಡಿರುವ ವೇಗದ ಬೌಲರ್ ದೀಪಕ್ ಚಾಹರ್ ಈ ಪಂದ್ಯದಲ್ಲಿ ಆಡುತ್ತಾರೆಯೋ ಇಲ್ಲವೋ ಎಂಬುದು ಸಂದೇಹ. ಈ ಬಾರಿಯ ಭಾರತ ಪ್ರವಾಸದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ವೆಸ್ಟ್ ಇಂಡೀಸ್‌ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಅವರಿಗೆ ವಿಶ್ರಾಂತಿ ನೀಡಿತ್ತು. ಮುಂದಿನ ಪಂದ್ಯಕ್ಕೆ ಲಭ್ಯ ಇರುವ ನಿರೀಕ್ಷೆ ಇದೆ ಎಂದು ತಂಡದ ಆಡಳಿತ ತಿಳಿಸಿದೆ. ನಿಕೋಲಸ್ ಪೂರನ್ ಫಾರ್ಮ್ ಕಂಡುಕೊಂಡಿರುವುದು ವೆಸ್ಟ್ ಇಂಡೀಸ್ ತಂಡದಲ್ಲಿ ಭರವಸೆ ಮೂಡಿಸಿದೆ. ಅರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ ಮತ್ತು ಮಧ್ಯಮ ಕ್ರಮಾಂಕದ ಕೀರನ್ ಪೊಲಾರ್ಡ್ ತಂಡಕ್ಕೆ ತಮ್ಮಿಂದಾದ ಕಾಣಿಕೆ ನೀಡಿದ್ದಾರೆ. ಹೀಗಾಗಿ ಅವರ ಮೇಲೆಯೂ ನಿರೀಕ್ಷೆ ಇದೆ. ಆರಂಭ: ಸಂಜೆ 7.00 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಶ್ರೇಯಸ್ ಅಯ್ಯರ್‌ಗೆ ತಂಡದ ತಂತ್ರಗಳ ಬಗ್ಗೆ ವಿವರಿಸಲಾಗಿದೆ. ಆಲ್‌ರೌಂಡರ್‌ ಜೊತೆ ವಿಶ್ವಕಪ್ ಟೂರ್ನಿಗೆ ತೆರಳುವುದು ತಂಡದ ಉದ್ದೇಶವಾಗಿರುವುದರಿಂದ ಕೆಲವು ಬದಲಾವಣೆಗಳು ಅನಿವಾರ್ಯ. ರೋಹಿತ್ ಶರ್ಮಾ ಭಾರತ ತಂಡದ ನಾಯಕ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.