ಸ್ಮಿತ್ ಕಂಕಷನ್: ಸರಣಿಗೆ ಅಲಭ್ಯ ಸಿಡ್ನಿ: ಶ್ರೀಲಂಕಾ ಎದುರು ಭಾನುವಾರ ನಡೆದಿದ್ದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವನ್ ಸ್ಮಿತ್ ಅವರಿಗೆ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ತಲೆಗೆ ಪೆಟ್ಟಾಗಿತ್ತು. ಆದ್ದರಿಂದ ಅವರನ್ನು ಸರಣಿಯಲ್ಲಿರುವ ಮುಂದಿನ ಮೂರು ಪಂದ್ಯಗಳಿಂದ ಕೈಬಿಡಲಾಗಿದೆ. ಕಂಕಷನ್ ನಿಯಮದ ಪ್ರಕಾರ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು. ‘ಹೆಚ್ಚು ಪೆಟ್ಟಾಗಿಲ್ಲ. ಆದರೆ, ಶಿಷ್ಟಾಚಾರದ ಪ್ರಕಾರ ಕೆಲವು ದಿನಗಳವರೆಗೆ ಅವರಿಗೆ ಚಿಕಿತ್ಸೆ ನೀಡಲಾಗುವುದು. 6–7 ದಿನಗಳಲ್ಲಿ ಅವರು ಗುಣಮುಖರಾಗುವ ನಿರೀಕ್ಷೆ ಇದೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಲಂಕಾ ಎದುರಿನ ಪಂದ್ಯದಲ್ಲಿ ಚೆಂಡು ಸಿಕ್ಸರ್‌ ಆಗುವುದನ್ನು ತಪ್ಪಿಸಲು ಬೌಂಡರಿಲೈನ್‌ ಬಳಿ ಸ್ಮಿತ್ ಡೈವ್ ಮಾಡಿದರು. ಆದರೆ ಚೆಂಡನ್ನು ಕ್ಯಾಚ್ ಮಾಡುವಲ್ಲಿ ವಿಫಲರಾದರು. ಕೆಳಗೆ ಬಿದ್ದಾಗ ತಲೆಗೆ ಪೆಟ್ಟಾಯಿತು. ಸಹ ಆಟಗಾರರಾದ ಪ್ಯಾಟ್ ಕಮಿನ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡಲೇ ವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಸ್ಮಿತ್ ಅವರನ್ನು ಡ್ರೆಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ಮಾರ್ಚ್‌ ತಿಂಗಳಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸಕ್ಕೆ ತೆರಳಲಿದೆ. ಅಲ್ಲಿಯವರೆಗೆ ಸ್ಮಿತ್ ಚೇತರಿಸಿಕೊಂಡು ಪಾಕ್‌ಗೆ ತೆರಳುವ ನಿರೀಕ್ಷೆ ಇದೆ. ಕೆಲವು ವರ್ಷಗಳ ಹಿಂದೆ ಸ್ಮಿತ್ ಕಂಕಷನ್‌ಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.