ಹರಾಜನ್ನು ನಿಲ್ಲಿಸಬೇಕೆಂದುಕೊಂಡಿದ್ದೆ: ₹14ಕೋಟಿಗೆ ಸೇಲ್ ಆದ ಚಾಹರ್ ಹೇಳಿದ್ದೇನು? ಚೆನ್ನೈ: ಐಪಿಎಲ್ ಹರಾಜಿನಲ್ಲಿ ₹ 14 ಕೋಟಿ ಬೃಹತ್ ಮೊತ್ತಕ್ಕೆ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿರುವ ವೇಗಿ ದೀಪಕ್ ಚಾಹರ್, ಹರಾಜಿನ ಮೊತ್ತ ₹ 13 ಕೋಟಿಗೆ ತಲುಪುತ್ತಿದ್ದಂತೆ ಹರಾಜನ್ನು ನಿಲ್ಲಿಸಬೇಕೆಂದುಕೊಂಡಿದ್ದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸ್ಟಾರ್ ಸ್ಫೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಮತ್ತೆ ಸಿಎಸ್‌ಕೆ ತಂಡದಲ್ಲಿ ಆಡಬೇಕೆಂದು ಬಯಸಿದ್ದೆ. ಹಳದಿ ಜೆರ್ಸಿ ಬಿಟ್ಟು ಬೇರಾವ ಜೆರ್ಸಿಯನ್ನು ಊಹಿಸಲೂ ಸಹ ನನಗೆ ಇಷ್ಟವಿರಲಿಲ್ಲ. ಈ ಮಧ್ಯೆ, ನನ್ನ ಮೇಲೆ ಮಾಡಲಾದ ಬಿಡ್ಡಿಂಗ್ ಅತ್ಯಂತ ದುಬಾರಿ ಎನಿಸಿತು. ಒಬ್ಬ ಸಿಎಸ್‌ಕೆ ಆಟಗಾರನಾಗಿ ಒಂದೊಳ್ಳೆ ಬಲಿಷ್ಠ ತಂಡವನ್ನು ಕಟ್ಟುವುದು ನನ್ನ ಬಯಕೆಯಾಗಿದೆ. ಹಾಗಾಗಿ, ಹರಾಜಿನಲ್ಲಿ ₹13 ಕೋಟಿ ತಲುಪುತ್ತಿದ್ದಂತೆ ಹರಾಜನ್ನು ನಿಲ್ಲಿಸಿ ಸಿಎಸ್‌ಕೆಗೆ ಹೋಗುತ್ತೇನೆ ಎಂದು ಘೋಷಿಸುವ ಚಿಂತನೆ ಬಂದಿತ್ತು. ಉಳಿದ ಹಣದಲ್ಲಿ ಬೇರೆ ಆಟಗಾರರನ್ನು ಖರೀದಿಸಿ ಒಳ್ಳೆ ತಂಡ ಕಟ್ಟುವ ಇರಾದೆ ಇತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಭಾರತದ ಸೀಮಿತ ಓವರ್‌ಗಳ ತಂಡದ ಆಟಗಾರನಾಗಿರುವ ಚಾಹರ್,‘ನೀನು ಯಾವಾಗಲೂ ಚೆನ್ನೈ ತಂಡದಲ್ಲಿ ಆಡುವೆ ಎಂದು ನಮ್ಮ ಫ್ರಾಂಚೈಸಿ ಮಾಲೀಕ ಎನ್ ಶ್ರೀನಿವಾಸನ್ 2018ರಲ್ಲೇ ಹೇಳಿದ್ದರು. ಅಂದಿನಿಂದ ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಆಡಳಿತ ಮಂಡಳಿ ಜೊತೆ ನಾನು ಎಂದೂ ಚರ್ಚೆ ಮಾಡಿಯೇ ಇರಲಿಲ್ಲ’ ಎಂದು ಅವರು ಹೇಳಿದರು. ಸದ್ಯ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಟಿ–20 ಸರಣಿಗಾಗಿ ಕೋಲ್ಕತ್ತಗೆ ತೆರಳಿದೆ. ಅಲ್ಲಿ ತಂಡದ ಎಲ್ಲ ಸದಸ್ಯರು ಹರಾಜನ್ನು ಅತ್ಯಂತ ಕುತೂಹಲದಿಂದ ನೋಡುತ್ತಿದ್ದರು. ಪ್ರತಿಯೊಬ್ಬರು ಎಷ್ಟು ನಿಮ್ಮ ಬೆಲೆ ಎಂದು ಮಾತನಾಡುತ್ತಿದ್ದರು ಎಂದು ಚಾಹರ್ ಹೇಳಿದ್ದಾರೆ. ಸತತ ಐದನೇ ಸೀಸನ್ನಿನಲ್ಲಿ ಚಾಹರ್ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2018ರಲ್ಲಿ ಅವರನ್ನು 80 ಲಕ್ಷಕ್ಕೆ ಖರೀದಿಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.