ಎನ್‌ಸಿಎ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ಬೆಂಗಳೂರು: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೂತನ ಕಟ್ಟಡ ಕಾಮಗಾರಿಗಾಗಿ ಸೋಮವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಶಿಲಾನ್ಯಾಸ ಮಾಡಿದರು. ಜಾಲ ಹೋಬಳಿಯ ಬಂಡೆ ಕೊಡಿಗೆಹಳ್ಳಿಯ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಜಮೀನಿನಲ್ಲಿ ನೂತನ ಕಟ್ಟಡ ಮತ್ತು ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. 2000ರಲ್ಲಿ ಬೆಂಗಳೂರಿನಲ್ಲಿ ಎನ್‌ಸಿಎ ಆರಂಭವಾಗಿತ್ತು. ಆಗಿನಿಂದಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯು ಇಲ್ಲಿಯ ‘ಬಿ’ ಗ್ರೌಂಡ್ ಅನ್ನು ಹೊರಾಂಗಣ ಅಭ್ಯಾಸ ಮತ್ತು ಒಳಾಂಗಣ, ಜಿಮ್ನಾಶಿಯಂಗಳನ್ನು ನೀಡಿದೆ. ಇದೀಗ ನೂತನ ಅಕಾಡೆಮಿಯ ಕಟ್ಟಡವು ಒಂದು ವರ್ಷದಲ್ಲಿ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಇದರಲ್ಲಿ ಮೂರು ಮೈದಾನಗಳೂ ಇರಲಿವೆ. ಇದರಲ್ಲಿ ದೇಶಿ ಟೂರ್ನಿಯ ಪಂದ್ಯಗಳನ್ನು ಆಡುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ಬಿಸಿಸಿಐ ಜಮೀನನ್ನು 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದುಕೊಂಡಿದೆ. ‘ನೂತನ ಎನ್‌ಸಿಎ ನಿರ್ಮಾಣವಾಗಲಿದೆ. ಹೊಸ ತಾಣದಲ್ಲಿ ಶಿಲಾನ್ಯಾಸ ನೆರವೇರಿಸಲು ಸಂತಸವಾಗುತ್ತಿದೆ‘ ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ. ‘ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮತ್ತು ಕ್ರೀಡೆಯ ಬೆಳವಣಿಗೆಗೆ ಈ ಮೂಲಸೌಲಭ್ಯವು ನೆರವಾಗಲಿದೆ. ಇದು ನಮ್ಮೆಲ್ಲರ ಸಾಮೂಹಿಕ ದೂರದೃಷ್ಟಿಯ ಫಲವಾಗಿದೆ’ ಎಂದು ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ ಧುಮಾಲ್, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ.ಅಭಿರಾಮ್, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.