ಬಾಲಕನ ಚಿಕಿತ್ಸೆಗೆ ರಾಹುಲ್ ₹31 ಲಕ್ಷ ದೇಣಿಗೆ ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರು 11 ವರ್ಷದ ಉದಯೋನ್ಮುಖ ಕ್ರಿಕೆಟಿಗ ವರದ್ ನಾಲವಡೆಯ ಚಿಕಿತ್ಸೆಗಾಗಿ ₹31 ಲಕ್ಷ ಸಹಾಯ ನೀಡಿದ್ದಾರೆ. ಬೋನ್‌ ಮ್ಯಾರೊ ಟ್ರಾನ್ಸ್‌ಪ್ಲಾಂಟ್ (ಬಿಎಂಟಿ) ಚಿಕಿತ್ಸೆ ಪಡೆಯುತ್ತಿರುವ ವರದ್ ಎಂಬ ಬಾಲಕನಿಗೆ ರಾಹುಲ್ ಸಹಾಯಹಸ್ತ ಚಾಚಿದ್ದಾರೆ. ಹೋದ ಡಿಸೆಂಬರ್‌ನಲ್ಲಿ ವಿಮಾ ಪ್ರತಿನಿಧಿಯಾಗಿರುವ ಸಚಿನ್ ಮತ್ತು ಅವರ ಪತ್ನಿ ಸ್ವಪ್ನಾ ಝಾ ಅವರು ಹೋದ ಡಿಸೆಂಬರ್‌ನಲ್ಲಿ ತಮ್ಮ ಮಗ ವರದ್ ಚಿಕಿತ್ಸೆಗೆ ₹ 35 ಲಕ್ಷ ರೂಪಾಯಿ ಅಗತ್ಯವಿದೆಯೆಂದು ಸಹಾಯನಿಧಿಗಾಗಿ ಕೋರಿದ್ದರು.ರಾಹುಲ್ ಅವರ ತಂಡವು ಇದಕ್ಕೆ ಸ್ಪಂದಿಸಿತ್ತು. ಐದನೇ ತರಗತಿ ವಿದ್ಯಾರ್ಥಿಯಾಗಿರುವ ವರದ್‌ಗೆ ಅಪ್ಲಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ರಕ್ತಸಂಬಂಧಿ ಕಾಯಿಲೆ ಇರುವುದನ್ನು ಮುಂಬೈನ್ ಜಸ್‌ಲೋಕ್ ಆಸ್ಪತ್ರೆಯ ವೈದ್ಯರು ಪತ್ತೆ ಮಾಡಿದ್ದರು. ಇಂತಹ ಕಾಯಿಲೆ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಬಹಳ ದುರ್ಬಲವಾಗಿರುತ್ತದೆ. ಸಾಮಾನ್ಯ ಜ್ವರವೂ ತಿಂಗಳಾನುಗಟ್ಟಲೆ ಕಾಡುತ್ತದೆ. ಆದ್ದರಿಂದ ಬಿಎಂಟಿ ಚಿಕಿತ್ಸೆಯೊಂದೇ ಪರಿಹಾರ ಎಂದು ವೈದ್ಯರು ಹೇಳಿದ್ದರು. ‘ವರದ್ ಬಗ್ಗೆ ತಿಳಿದಾಗ ನಮ್ಮ ತಂಡವು ಸತತವಾಗಿ ಸಂಪರ್ಕ ಸಾಧಿಸಿತು. ಗಿವ್ ಇಂಡಿಯಾ ಸಂಸ್ಥೆಯೊಂದಿಗೆ ಸಹಾಯಹಸ್ತ ಚಾಚಲು ಮುಂದಾಗಿದೆ. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿರುವುದು ಸಂತಸ ತಂದಿದೆ. ವರದ್ ಶೀಘ್ರದಲ್ಲಿ ಗುಣಮುಖನಾಗುವ ಭರವಸೆ ಮೂಡಿದೆ’ ಎಂದು ರಾಹುಲ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.