ವಿಂಡೀಸ್‌ನಲ್ಲಿ ಭಾರತ ಯುವಪಡೆಯನ್ನೂ ಕಾಡಿತ್ತು ಲಸಿಕೆ! ನವದೆಹಲಿ: ವೆಸ್ಟ್ ಇಂಡೀಸ್‌ನಲ್ಲಿ ಈಚೆಗೆ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಬಂದ ಭಾರತ ತಂಡದ ಹಾದಿ ಸರಳವಾಗಿರಲಿಲ್ಲ. ಕೆರಿಬಿಯನ್ ದ್ವೀಪಕ್ಕೆ ಕಾಲಿಟ್ಟ ಮೊದಲ ದಿನದಿಂದಲೇ ಕಷ್ಟಗಳ ಹಾದಿಯನ್ನು ತುಳಿದು ಇತಿಹಾಸ ಬರೆಯಿತು. ಭಾರತ ತಂಡದಲ್ಲಿದ್ದ ಏಳು ಆಟಗಾರರಿಗೆ ಕೋವಿಡ್ ಲಸಿಕೆ ನೀಡಲಾಗಿರಲಿಲ್ಲ. ಆದ್ದರಿಂದ ಅವರೆರಲ್ಲರನ್ನೂ ಮರಳಿ ಭಾರತಕ್ಕೆ ಹೋಗುವಂತೆ ಅಲ್ಲಿಯ ಆಡಳಿತ ಸೂಚಿಸಿತ್ತು. ಅವರು ಸುಮಾರು 24 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆದಿದ್ದರು. ತಂಡದ ಸ್ಥಳೀಯ ಮ್ಯಾನೇಜರ್ ಲೊಬ್ಜಾಂಗ್ ಜಿ ತೆನ್ಜಿಂಗ್ ಅವರು ಈ ಸಂದರ್ಭದಲ್ಲಿ ಭಾರತ ತಂಡದ ಸಹಾಯಕ್ಕೆ ನಿಂತರು. ಐಸಿಸಿ ಮತ್ತು ಬಿಸಿಸಿಐನಲ್ಲಿರುವ ಕೆಲವು ಅಧಿಕಾರಿಗಳ ನೆರವಿನೊಂದಿಗೆ ಸ್ಥಳೀಯ ಸರ್ಕಾರದೊಂದಿಗೆ ಸಂವಹನ ನಡೆಸಿದರು. ಭಾರತ ಮತ್ತು ಟ್ರಿನಿಡಾಡ್ ಸರ್ಕಾರಗಳೊಂದಿಗೆ ಮಾತನಾಡಿ ಪರಿಹಾರದ ದಾರಿ ಹುಡುಕಿದರು. ‘ಸುದೀರ್ಘ ಪ್ರಯಾಣದ ನಂತರ ಪೋರ್ಟ್ ಆಫ್‌ ಸ್ಪೇನ್‌ಗೆ ಬಂದಿಳಿದಿದ್ದೆವು. ಅಲ್ಲಿಂದ ಗಯಾನಕ್ಕೆ ಖಾಸಗಿ ವಿಮಾನದಲ್ಲಿ ತೆರಳಬೇಕಿತ್ತು. ಆದರೆ, ಲಸಿಕೆ ಪಡೆಯದಿದ್ದ ಏಳು ಹುಡುಗರನ್ನು ಅಲ್ಲಿ ತಡೆಯಲಾಯಿತು. 18ರೊಳಗಿನ ವಯೋಮಿತಿಯೊಳಗಿನವರಿಗೆ ಆಗಿನ್ನೂ ಭಾರತದಲ್ಲಿ ಲಸಿಕೆ ನೀಡಲಾಗುತ್ತಿಲ್ಲವೆಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆವು. ಆದರೆ, ಇನ್ನೊಂದು ವಿಮಾನದ ಮೂಲಕ ದೇಶದಿಂದ ಹೊರನಡೆಯಿರಿ ಎಂದರು. ಭದ್ರತಾ ಸಿಬ್ಬಂದಿ ನಮ್ಮನ್ನು ಸುತ್ತುವರಿದಿತ್ತು. ಆದರೆ, ಅಂದು ಇದ್ದ ಏಕೈಕ ಲುಫ್ತಾನ್ಸಾ ವಿಮಾನ ಹೊರಟುಹೋಗಿತ್ತು. ಮುಂದಿನ ವಿಮಾನ ಮೂರು ದಿನಗಳ ನಂತರವಿತ್ತು. ಇದು ನಮಗೆ ಅನುಕೂಲವಾಯಿತು. ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಲು ಆರಂಭಿಸಿದೆವು. ಅಂದು ರಾತ್ರಿ ವಿಮಾನ ನಿಲ್ದಾಣದ ಸಮೀಪದ ಸಣ್ಣ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಬೇಕಾಯಿತು. ಐಸಿಸಿಯೂ ಮಧ್ಯಸ್ಥಿಕೆ ವಹಿಸಿತು’ ಎಂದು ತೆನ್ಜಿಂಗ್ ವಿವರಿಸಿದರು. ಈ ಏಳು ಜನರಲ್ಲಿ ಎಡಗೈ ಮಧ್ಯಮವೇಗಿ ರವಿಕುಮಾರ್, ಅಂಗಕ್ರಿಷ್ ರಘುವಂಶಿ ಕೂಡ ಇದ್ದರು. ಭಾರತದ ವಿಜಯದಲ್ಲಿ ರವಿಕುಮಾರ್ ಪ್ರಮುಖ ಪಾತ್ರ ವಹಿಸಿದರು. ಕಡೆಗೂ ಸಮಸ್ಯೆ ಬಗೆಹರಿದು ತಂಡ ಆಡಲು ಸನ್ನದ್ಧವಾಯಿತು. ಆದರೆ, ಲೀಗ್ ಹಂತದ ಮಧ್ಯದಲ್ಲಿ ನಾಯಕ ಯಶ್ ಧೂಳ್ ಸೇರಿದಂತೆ ಆರು ಆಟಗಾರರು ಕೋವಿಡ್‌ಗೆ ತುತ್ತಾದರು. ಚೇತರಿಸಿಕೊಂಡ ನಂತರ ಮರಳಿದ ಅವರೆಲ್ಲರೂ ಇತಿಹಾಸ ಬರೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.