ಟಿ20 ರ‍್ಯಾಂಕಿಂಗ್‌: ಶ್ರೇಯಸ್‌ ಅಯ್ಯರ್‌ಗೆ ಬಡ್ತಿ ದುಬೈ:ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿರುವ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ. ಸದ್ಯ ಅವರು 27 ಸ್ಥಾನಗಳ ಏರಿಕೆ ದಾಖಿಸಿದ್ದು, 18ನೇ ಸ್ಥಾನದಲ್ಲಿದ್ದಾರೆ. ಆದರೆ ವಿರಾಟ್‌ ಕೊಹ್ಲಿ ಅಗ್ರ 10ರೊಳಗಿನ ಪಟ್ಟಿಯಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ಎದುರು ತವರಿನಲ್ಲಿ ನಡೆದ ಸರಣಿಯಲ್ಲಿ ಅಮೋಘ ಸಾಮರ್ಥ್ಯ ತೋರಿದ್ದು, ಶ್ರೇಯಸ್‌ ಅವರ ಪ್ರಗತಿಗೆ ಕಾರಣವಾಗಿದೆ. 27 ವರ್ಷದ ಆಟಗಾರ ಮೂರು ಪಂದ್ಯಗಳಲ್ಲಿ 174ರ ಸರಾಸರಿಯಲ್ಲಿ 204 ರನ್‌ ಕಲೆಹಾಕಿದ್ದರು. ಅದರಲ್ಲಿ ಮೂರು ಅಜೇಯ ಅರ್ಧಶತಕಗಳಿದ್ದವು. ಭಾರತ ಸರಣಿಯನ್ನು 3–0ಯಿಂದ ಕ್ಲೀನ್‌ಸ್ವೀಪ್ ಮಾಡಿತ್ತು. ವೇಗಿ ಭುವನೇಶ್ವರ ಕುಮಾರ್‌ ಅವರು ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಏರಿಕೆ ಕಂಡಿದ್ದು, 17ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಪಾಥುಮ್‌ ನಿಸ್ಸಾಂಕ ಒಂಬತ್ತನೇ ಸ್ಥಾನಕ್ಕೇರಿದ್ದು, ಭಾರತ ತಂಡದ ನಿಕಟಪೂರ್ವ ನಾಯಕ ವಿರಾಟ್‌ ಕೊಹ್ಲಿ 10ರಿಂದ 15ನೇ ಸ್ಥಾನಕ್ಕೆ ಜಾರಿದ್ದಾರೆ. ಲಂಕಾ ಎದುರಿನ ಟಿ20 ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.