ಐಪಿಎಲ್‌: ಮಾರ್ಚ್ 14 ಅಥವಾ 15ರಿಂದ ತಂಡಗಳ ಅಭ್ಯಾಸ ಮುಂಬೈ: ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ತಂಡಗಳು ಇದೇ 14 ಅಥವಾ 15ರಂದುಮಹಾರಾಷ್ಟ್ರದ ಐದು ತಾಣಗಳಲ್ಲಿ ಅಭ್ಯಾಸ ಆರಂಭಿಸಲಿವೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಸಿಎ ಕ್ರೀಡಾಂಗಣ, ಥಾಣೆಯ ಎಂಸಿಎ ಅಂಗಣ, ಡಾ. ಡಿ. ವೈ. ಪಾಟೀಲ್ ವಿಶ್ವವಿದ್ಯಾಲಯದ ಅಂಗಣ,ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಫುಟ್‌ಬಾಲ್ ಪಿಚ್ ಜೊತೆಗೆ ಘನ್ಸೋಲಿಯ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಕ್ರೀಡಾಂಗಣಗಳನ್ನು ಅಭ್ಯಾಸಕ್ಕಾಗಿ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಮಾರ್ಚ್ 26ರಂದು ಐಪಿಎಲ್ ಆರಂಭವಾಗಲಿದೆ. 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಇದೇ 8ರಿಂದ ಆಟಗಾರರು ನಗರಕ್ಕೆ ಆಗಮಿಸುವ ಸಾಧ್ಯತೆಯಿದೆ. ಐಪಿಎಲ್ ಅನ್ನು ಸುಗಮವಾಗಿ ನಡೆಸಲು ಮಹಾರಾಷ್ಟ್ರ ಸರ್ಕಾರವು ಬಿಸಿಸಿಐ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯೊಂದಿಗೆ (ಎಂಸಿಎ) ದಕ್ಷಿಣ ಮುಂಬೈನಲ್ಲಿ ಸಭೆ ನಡೆಸಿತು‌. ರಾಜ್ಯ ಸರ್ಕಾರದ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಏಕನಾಥ್ ಶಿಂಧೆ, ಎಂಸಿಎ ಮುಖ್ಯಸ್ಥ ವಿಜಯ್ ಪಾಟೀಲ್ ಮತ್ತು ಅಪೆಕ್ಸ್ ಕೌನ್ಸಿಲ್ ಸದಸ್ಯರಾದ ಅಜಿಂಕ್ಯ ನಾಯಕ್ ಮತ್ತು ಅಭಯ್ ಹಡಪ್ಸಭೆಯಲ್ಲಿ ಉಪಸ್ಥಿತರಿದ್ದರು. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲರೂ ಮುಂಬೈಗೆ ಆಗಮಿಸುವ 48 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ. ಈ ಬಾರಿಯ ಐಪಿಎಲ್‌ ಮುಂಬೈ ಮತ್ತು ಪುಣೆಯ ಐದು ಕ್ರೀಡಾಂಗಣಗಳಲ್ಲಿ ನಿಗದಿಯಾಗಿದೆ. 2022: ಗುಜರಾತ್ ಟೈಟನ್ಸ್‌ ತಂಡ ಸೇರಲಿರುವ ‘ಮಿಸ್ಟರ್ ಐಪಿಎಲ್’ ಸುರೇಶ್ ರೈನಾ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.