ಸಾಧನೆಯ ಹಾದಿಯಲ್ಲಿ ಕೊಹ್ಲಿ ‘ಶತಕದ’ ಮೈಲಿಗಲ್ಲು ನವದೆಹಲಿ: ಭಾರತದ ‘ಸೂಪರ್ ಸ್ಟಾರ್’ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ನೂರನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಅವರು ನಾಯಕರಾಗಿ ಅಲ್ಲ, ಬರೀ ಬ್ಯಾಟರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಮುಂಬೈಕರ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಮೈಲುಗಲ್ಲು ಸಾಧಿಸಲಿದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಸಾಧ್ಯವಾಗದೇ ಇದ್ದರೂ ಉಪಖಂಡದ ಹೊರಗೆ ನಾಯಕತ್ವದಲ್ಲಿ ಅವರು ಅಮೋಘ ಸಾಧನೆ ಮಾಡಿದ್ದಾರೆ. 33 ವರ್ಷದ ಈ ಆಟಗಾರ ಟೆಸ್ಟ್ ಜೀವನದಲ್ಲಿ ‌ಅಮೂಲ್ಯ ಮತ್ತು ಅಪರೂಪದ ಇನಿಂಗ್ಸ್‌ಗಳ ಮೂಲಕ ಅನೇಕ ಬಾರಿ ತಂಡದ ಕೈ ಹಿಡಿದಿದ್ದಾರೆ. 2014ರಲ್ಲಿ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಸರಣಿ ಅರಂಭಕ್ಕೂ ಮೊದಲು ನಾಯಕ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡ ಕಾರಣ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗಮನಾರ್ಹ ಸಾಧನೆ ಮಾಡಿದ್ದರು. ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 115 ರನ್ ಗಳಿಸಿದ ಅವರು 364 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡದ ಪರ 141 ರನ್ ಗಳಿಸಿದ್ದರು. ಈ ಮೂಲಕ ತಂಡದ ಸೋಲಿನ ಅಂತರವನ್ನು 48 ರನ್‌ಗಳಿಗೆ ಇಳಿಸಿದ್ದರು. ಈ ಎರಡು ಇನಿಂಗ್ಸ್ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. 2017ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಡಿಆರ್‌ಎಸ್ ತೆಗೆದುಕೊಳ್ಳುವ ಮುನ್ನ ಪ್ರವಾಸಿ ತಂಡದ ಸ್ಟೀವ್ ಸ್ಮಿತ್ ಅವರು ಡ್ರೆಸಿಂಗ್ ಕೊಠಡಿಯತ್ತ ನೋಡಿದ್ದರು. ಇದಕ್ಕೆ ಆಕ್ಷೇಪವೆತ್ತಿದ ಕೊಹ್ಲಿ ಎದುರಾಳಿ ತಂಡದವರು ಡಿಆರ್‌ಎಸ್‌ ನಿಯಮವನ್ನು ಗೇಲಿ ಮಾಡುತ್ತಿದ್ದಾರೆ ಎಂದು ದೂರಿದ್ದರು. ಇದಾಗಿ ಎರಡು ವರ್ಷಗಳ ನಂತರ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್‌ ಸರಣಿ ಗೆದ್ದುಕೊಂಡಿತ್ತು. ಮೆಲ್ಬರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅವರು ಗಳಿಸಿದ 82 ರನ್‌ಗಳು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ತಂಡ 2–1ರಲ್ಲಿ ಜಯ ಗಳಿಸಿತ್ತು. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ ತಂಡ ಮೂರು ವರ್ಷ ಅದನ್ನು ಉಳಿಸಿಕೊಂಡಿತ್ತು. ಈ ಅವಧಿಯಲ್ಲಿ ತವರಿನಲ್ಲೂ ವಿದೇಶದಲ್ಲೂ ಅನೇಕ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಸಂದರ್ಭಗಳಲ್ಲೆಲ್ಲ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಸೊಗಯಿಸಿತ್ತು. ಟ್ವೆಂಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ದ್ವೇಷದ ಕಿಡಿ ಹಚ್ಚಿದವರ ಬಾಯಿ ಮುಚ್ಚಿಸಿದ ಮತ್ತು ಶಮಿ ಪರವಾಗಿ ನಿಂತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.