ಭಾರತ ಮಹಿಳಾ ಕ್ರಿಕೆಟ್‌: ಎಲ್ಲ ಮಾದರಿಗೆ ಕರುಣಾ ಜೈನ್‌ ವಿದಾಯ ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿಕೆಟ್‌ಕೀಪರ್‌ ಆಗಿದ್ದ ಕರುಣಾ ಜೈನ್‌ ಅವರು ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ನಿವೃತ್ತಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಕರುಣಾ ತಮ್ಮ ವೃತ್ತಿ ಜೀವನದಲ್ಲಿ ರಾಷ್ಟ್ರೀಯ ತಂಡವನ್ನು ಮಾತ್ರವಲ್ಲದೆ ಕರ್ನಾಟಕ, ಪುದುಚೇರಿ ಮತ್ತು ದಕ್ಷಿಣ ವಲಯ ತಂಡಗಳ ಪರ ಆಡಿದ್ದರು. ‘ಸಂತಸ ಮತ್ತು ಸಂತೃಪ್ತ ಭಾವದೊಂದಿಗೆ, ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ನಿವೃತ್ತಿ ಪ್ರಕಟಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಏನಾದರೂ ಕೊಡುಗೆ ನೀಡುವುದನ್ನು ಎದುರುನೋಡುತ್ತಿದ್ದೇನೆ’ ಎಂದು 36 ವರ್ಷದ ಕರುಣಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ‘ವೃತ್ತಿಜೀವನದ ಆರಂಭದ ದಿನದಿಂದ ಇಲ್ಲಿಯವರೆಗೆ ನನಗೆ ಬೆಂಬಲ, ಪ್ರೋತ್ಸಾಹ ನೀಡಿದ ಎಲ್ಲ ಕೋಚ್‌ಗಳು, ಸಹಾಯಕ ಸಿಬ್ಬಂದಿ ಮತ್ತು ಸಹ ಆಟಗಾರ್ತಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದಿದ್ದಾರೆ. 2004 ರಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಏಕದಿನ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು 44 ಪಂದ್ಯಗಳಿಂದ 987 ರನ್‌ ಕಲೆಹಾಕಿದ್ದಾರೆ. ಒಂದು ಶತಕ (103), ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಚೊಚ್ಚಲ ಪಂದ್ಯದಲ್ಲಿ 64 ರನ್‌ ಗಳಿಸಿ ಮಿಂಚಿದ್ದರು. ಐದು ಟೆಸ್ಟ್‌ಗಳನ್ನು ಆಡಿದ್ದು, 195 ರನ್‌ ಗಳಿಸಿದ್ದಾರೆ. 9 ಟಿ20 ಪಂದ್ಯಗಳಲ್ಲೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ.2014ರ ಬಳಿಕ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಚ್‌ ಮತ್ತು ಸ್ಟಂಪಿಂಗ್‌ ಮೂಲಕ 58 ಬ್ಯಾಟರ್‌ಗಳು ಔಟ್‌ ಆಗಲು ಕಾರಣರಾಗಿದ್ದರೆ, ಟಿ20ಯಲ್ಲಿ 12 ಮಂದಿಯನ್ನು ಔಟ್‌ ಮಾಡಲು ನೆರವಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.