ಹೇಯ್ಲಿ ಶತಕ: ವೆಸ್ಟ್ ಇಂಡೀಸ್ ಶುಭಾರಂಭ ಮೌಂಟ್‌ ಮಾಂಗನೂಯಿ, ನ್ಯೂಜಿಲೆಂಡ್‌: ಹೇಯ್ಲಿ ಮ್ಯಾಥ್ಯೂಸ್‌ (119, 128ಎ, 4X16‌, 6X1) ಅವರ ಅಮೋಘ ಶತಕದ ಬಲದಿಂದ ರೋಚಕ ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಆತಿಥೇಯ ನ್ಯೂಜಿಲೆಂಡ್‌ಅನ್ನು ಮಣಿಸಿ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿಯ ಬೇ ಓವಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಮೂರು ರನ್‌ಗಳಿಂದ ನ್ಯೂಜಿಲೆಂಡ್ ಎದುರು ಗೆದ್ದಿತು. ಕಿವೀಸ್‌ ನಾಯಕಿ ಸೋಫಿ ಡಿವೈನ್‌ ಶತಕ ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಪಂದ್ಯದ ಕೊನೆಯ ಓವರ್‌ನಲ್ಲಿ ಡಿಯಾಂಡ್ರಾ ಡಾಟಿನ್ ಎರಡು ವಿಕೆಟ್‌ ಗಳಿಸುವ ಮೂಲಕ ಅಡ್ಡಗಾಲು ಹಾಕಿದರು. ಟಾಸ್ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿ ಆರಂಭ ಪಡೆದ ವೆಸ್ಟ್ ಇಂಡೀಸ್‌ ನಿಧಾನಗತಿಯ ಆಟಕ್ಕೆ ಮೊರೆ ಹೋದರೂ ಒಂಬತ್ತು ವಿಕೆಟ್‌ ಕಳೆದುಕೊಂಡು 259 ರನ್‌ ಗಳಿಸಿತು. ನ್ಯೂಜಿಲೆಂಡ್‌ ಮಹಿಳೆಯರು ಒಂದು ಎಸೆತ ಬಾಕಿ ಇರುವಂತೆಯೇ ಎಲ್ಲ ವಿಕೆಟ್ ಕೈಚೆಲ್ಲಿ 256 ರನ್‌ ಗಳಿಸಿದರು. ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್‌ ಟೂರ್ನಿಯ ಮೊದಲ ವಿಕೆಟ್‌ ರೂಪದಲ್ಲಿ ಲೀ ತಾಹುಹು ಬೌಲಿಂಗ್‌ನಲ್ಲಿ ಜೆಸ್‌ ಕೆರ್‌ಗೆ ಕ್ಯಾಚ್ ನೀಡಿದರು. ಮಧ್ಯಮ ಕ್ರಮಾಂಕದಿಂದ ಆರಂಭಿಕ ಬ್ಯಾಟಿಂಗ್‌ಗೆ ಬಡ್ತಿ ಪಡೆದ ಹೇಯ್ಲಿ ಮ್ಯಾಥ್ಯೂಸ್‌ ಚೊಚ್ಚಲ ಶತಕ ಸಿಡಿಸಿ ಮಿನುಗಿದರು. ಎರಡು ವಿಕೆಟ್‌ ಕೂಡ ಕಬಳಿಸಿದ ಅವರ ಆಲ್‌ರೌಂಡ್‌ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ವೆಸ್ಟ್ ಇಂಡೀಸ್‌ಗೆ ಚೆಡೀನ್‌ ನೇಷನ್‌ (36) ಮತ್ತು ನಾಯಕಿ ಸ್ಟೆಫಾನಿ ಟೇಲರ್‌ (30) ಕಾಣಿಕೆ ನೀಡಿದರು. ಕಿವೀಸ್‌ ತಂಡದ ತಾಹುಹು (57ಕ್ಕೆ 3) ಉತ್ತಮ ಬೌಲಿಂಗ್ ಮಾಡಿದರು. ಪ್ರವಾಸಿ ತಂಡದ ಇನಿಂಗ್ಸ್‌ಗೆ ಉತ್ತರವಾಗಿ ಡಿವೈನ್‌ ಶ್ರೇಷ್ಠ ಆಟವಾಡಿದರು. ಕಳಪೆ ಫೀಲ್ಡಿಂಗ್ ಲಾಭ ಪಡೆದ ಅವರು 117 ಎಸೆತಗಳಲ್ಲಿ ತಮ್ಮ ಆರನೇ ಶತಕ ಗಳಿಸಿದರು. ಆದರೆ 45ನೇ ಓವರ್‌ನಲ್ಲಿ ಅವರು ಚಿನೆಲ್ಲೆ ಹೆನ್ರಿ ಅವರಿಗೆ ವಿಕೆಟ್‌ ಒಪ್ಪಿಸಿದ ಬಳಿಕ ತಂಡ ಸಂಕಷ್ಟಕ್ಕೆ ಸಿಲುಕಿತು. ರನ್‌ ರೇಟ್‌ ಕುಸಿಯುತ್ತಾ ಸಾಗಿತು. ಕೇಟಿ ಮಾರ್ಟಿನ್ (44) ಮಾತ್ರ ಪ್ರತಿರೋಧ ತೋರಿದರು. ಕೊನೆಯ ಓವರ್‌ನಲ್ಲಿ ಡಿಯಾಂಡ್ರಾ ಎರಡು ವಿಕೆಟ್‌ ಗಳಿಸಿದ್ದಲ್ಲದೆ ಒಂದು ರನೌಟ್‌ಗೂ ಕಾರಣರಾದರು. ಇದರೊಂದಿಗೆ ತಂಡಕ್ಕೆ ರೋಚಕ ಜಯದ ಸಿಹಿ ಉಣಬಡಿಸಿದರು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 (ಹೇಯ್ಲಿ ಮ್ಯಾಥ್ಯೂಸ್‌ 119, ಸ್ಟೆಫಾನಿ ಟೇಲರ್‌ 30, ಶೆಮೇನ್‌ ಕ್ಯಾಂಪ್‌ಬೆಲ್‌ 20, ಚೆಡೀನ್ ನೇಷನ್‌ 36; ಲೀ ತಾಹುಹು 57ಕ್ಕೆ 3, ಜೆಸ್ ಕೆರ್‌ 43ಕ್ಕೆ 2, ಹನ್ನಾ ರೊವ್‌ 51ಕ್ಕೆ 1, ಅಮೇಲಿಯಾ ಕೆರ್ 33ಕ್ಕೆ 1). ನ್ಯೂಜಿಲೆಂಡ್‌: 49.5 ಓವರ್‌ಗಳಲ್ಲಿ 256 (ಸೋಫಿ ಡಿವೈನ್‌ 108, ಆ್ಯಮಿ ಸದರ್‌ವೈಟ್‌ 31, ಕೇಟಿ ಮಾರ್ಟಿನ್‌ 44, ಜೆಸ್ ಕೆರ್‌ 25; ಚಿನೆಲ್ಲೆ ಹೆನ್ರಿ 53ಕ್ಕೆ 1, ಹೇಯ್ಲಿ ಮ್ಯಾಥ್ಯೂಸ್‌ 41ಕ್ಕೆ 2, ಶಕೇರಾ ಸೆಲ್ಮನ್‌ 37ಕ್ಕೆ 1, ಅನೀಸಾ ಮೊಹಮ್ಮದ್‌ 60ಕ್ಕೆ 2, ಡಿಯಾಂಡ್ರಾ ಡಾಟಿನ್‌ 2ಕ್ಕೆ 2). ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ ಮೂರು ರನ್‌ಗಳ ಜಯ. ಇಂದಿನ ಪಂದ್ಯ: ಬಾಂಗ್ಲಾದೇಶ–ದಕ್ಷಿಣ ಆಫ್ರಿಕಾ, ಆರಂಭ: ಬೆಳಿಗ್ಗೆ 3.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.