ಅಕ್ಷರ್‌ ಅಬ್ಬರಕ್ಕೆ ಒಲಿದ ಜಯ ಪೋರ್ಟ್ ಆಫ್ ಸ್ಪೇನ್: ಒತ್ತಡದ ಸಮಯದಲ್ಲೂ ಭರ್ಜರಿ ಆಟವಾಡಿದ ಅಕ್ಷರ್‌ ಪಟೇಲ್‌, ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತಕ್ಕೆ ಎರಡು ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು. ಕ್ವೀನ್ಸ್‌ ಪಾರ್ಕ್‌ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 312 ರನ್‌ಗಳ ಗುರಿ ಪಡೆದ ಭಾರತ, 49.4 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಆತಿಥೇಯ ತಂಡ ಶಾಯ್‌ ಹೋಪ್‌ (115) ಮತ್ತು ನಿಕೊಲಸ್‌ ಪೂರನ್ (74) ಅವರ ಉತ್ತಮ ಆಟದ ನೆರವಿನಿಂದ 6 ವಿಕೆಟ್‌ಗೆ 311 ರನ್‌ ಕಲೆಹಾಕಿತ್ತು. ಈ ಗೆಲುವಿನ ಮೂರು ಶಿಖರ್‌ ಧವನ್‌ ಬಳಗ ಮೂರು ಪಂದ್ಯಗಳ ಸರಣಿಯನ್ನು 2–0 ರಲ್ಲಿ ಗೆದ್ದುಕೊಂಡಿತು. ಮೂರನೇ ಹಾಗೂ ಕೊನೆಯ ಪಂದ್ಯ ಜುಲೈ 27 ರಂದು ನಡೆಯಲಿದೆ. 35 ಎಸೆತಗಳಲ್ಲಿ ಅಜೇಯ 64 ರನ್‌ ಗಳಿಸಿದ ಅಕ್ಷರ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಮೂರು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಹೊಡೆದ ಅವರು ಕೊನೆಯ ಓವರ್‌ಗಳಲ್ಲಿ ಪಂದ್ಯವನ್ನು ವಿಂಡೀಸ್‌ ಕೈಯಿಂದ ಕಿತ್ತುಕೊಂಡರು. ಸವಾಲಿನ ಗುರಿ ಬೆನ್ನಟ್ಟಿದ ಭಾರತ 39ನೇ ಓವರ್‌ನಲ್ಲಿ ಐದು ವಿಕೆಟ್‌ಗೆ 205 ರನ್‌ ಗಳಿಸಿ ಸೋಲಿನ ಹಾದಿ ಹಿಡಿದಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಅಕ್ಷರ್‌, ದೀಪಕ್‌ ಹೂಡಾ (33 ರನ್, 36 ಎ., 4X2) ಜತೆ ಆರನೇ ವಿಕೆಟ್‌ಗೆ 33 ಎಸೆತಗಳಲ್ಲಿ 51 ರನ್‌ ಸೇರಿಸಿದರು. ಆ ಬಳಿಕ ಕೊನೆಯ ಕ್ರಮಾಂಕದ ಆಟಗಾರರ ನೆರವಿನೊಂದಿಗೆ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಭಾರತದ ಜಯಕ್ಕೆ ಕೊನೆಯ ಮೂರು ಎಸೆತಗಳಲ್ಲಿ ಆರು ರನ್‌ಗಳು ಬೇಕಿದ್ದವು. ಕೈಲ್‌ ಮೇಯರ್ಸ್‌ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿ ಗೆಲುವಿನ ಸಂಭ್ರಮ ಆಚರಿಸಿದರು. ಶ್ರೇಯಸ್, ಸ್ಯಾಮ್ಸನ್‌ ಅರ್ಧಶತಕ: ಮೊದಲ ಪಂದ್ಯದ ‘ಹೀರೊ’ ಶಿಖರ್‌ ಧವನ್‌ (13) ಅವರನ್ನು ಭಾರತ ಬೇಗನೇ ಕಳೆದುಕೊಂಡಿತು. ಉತ್ತಮ ಆರಂಭ ನೀಡಿದ ಶುಭಮನ್‌ ಗಿಲ್ (43 ರನ್, 49 ಎ., 4X5) ಅರ್ಧಶತಕಕ್ಕೆ ಏಳು ರನ್‌ಗಳು ಬೇಕಿದ್ದಾಗ ಔಟ್‌ ಆದರು. ಒಟ್ಟು ಸ್ಕೋರ್‌ 79 ಆಗಿದ್ದಾಗ ಸೂರ್ಯಕುಮಾರ್ ಯಾದವ್‌ (9) ಕೂಡಾ ಔಟಾದದ್ದು, ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಈ ವೇಳೆ ಜತೆಯಾದ ಶ್ರೇಯಸ್‌ ಅಯ್ಯರ್‌ (63 ರನ್‌, 71 ಎ., 4X4, 6X1) ಮತ್ತು ಸಂಜು ಸ್ಯಾಮ್ಸನ್ (54 ರನ್‌, 51 ಎ., 4X3, 6X3) ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 94 ಎಸೆತಗಳಲ್ಲಿ 99 ರನ್‌ ಸೇರಿಸಿದರು. ಶ್ರೇಯಸ್‌ ಅವರನ್ನು ಎಲ್‌ಬಿ ಬಲೆಯಲ್ಲಿ ಬೀಳಿಸಿದ ಅಲ್ಜಾರಿ ಜೋಸೆಫ್‌ ಈ ಜತೆಯಾಟ ಮುರಿದರು. ಅಲ್ಪ ಸಮಯದ ಬಳಿಕ ಸ್ಯಾಮ್ಸನ್‌ ರನೌಟಾದರು. ಇವರಿಬ್ಬರು ಔಟಾದಾಗ ತಂಡದ ಗೆಲುವಿಗೆ 11 ಓವರ್‌ಗಳಲ್ಲಿ 105 ರನ್‌ಗಳು ಬೇಕಿದ್ದವು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 311. ಭಾರತ: 49.4 ಓವರ್‌ಗಳಲ್ಲಿ 8 ವಿಕೆಟ್‌ಗೆ 312 (ಶುಭಮನ್‌ ಗಿಲ್‌ 43, ಶ್ರೇಯಸ್‌ ಅಯ್ಯರ್‌ 63, ಸಂಜು ಸ್ಯಾಮ್ಸನ್‌ 54, ದೀಪಕ್‌ ಹೂಡಾ 33, ಅಕ್ಷರ್‌ ಪಟೇಲ್‌ ಔಟಾಗದೆ 64, ಅಲ್ಜಾರಿ ಜೋಸೆಫ್‌ 46ಕ್ಕೆ 2, ಕೈಲ್‌ ಮೇಯರ್ಸ್‌ 48ಕ್ಕೆ 2, ಜೇಡೆನ್‌ ಸೀಲ್ಸ್‌ 40ಕ್ಕೆ 1) ಫಲಿತಾಂಶ: ಭಾರತಕ್ಕೆ 2 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.