ಪಾಕಿಸ್ತಾನಕ್ಕೆ ಬಲ ತುಂಬಿದ ಇಮಾಮ್ ಶತಕ ರಾವಲ್ಪಿಂಡಿ: ಮೂರು ವರ್ಷಗಳ ನಂತರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಎಡಗೈ ಬ್ಯಾಟರ್ ಇಮಾಮ್ ಉಲ್ ಹಕ್ ಅವರು ಬೌಲರ್‌ಗಳನ್ನು ದಿನವಿಡೀ ಕಾಡಿದರು. ಅವರ ಅಮೋಘ ಶತಕದ ಬಲದಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 245 ರನ್‌ ಗಳಿಸಿದೆ. ಇಮಾಮ್ ಉಲ್ ಹಕ್‌ 132 (271 ಎಸೆತ; 15 ಬೌಂಡರಿ, 2 ಸಿಕ್ಸರ್‌)ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದು ಅರ್ಧಶತಕ ಗಳಿಸಿರುವ ಅಜರ್ ಅಲಿ (64; 165 ಎ, 4 ಎ, 1 ಸಿ) ಕೂಡ ಕ್ರೀಸ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ 24 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಅಬ್ದುಲ್ಲ ಶಫೀಕ್ ಮತ್ತು ಇಮಾಮ್ 105 ರನ್ ಸೇರಿಸಿದರು. ನೇಥನ್ ಲಯನ್ ಎಸೆತದಲ್ಲಿ ಶಫೀಕ್ ಔಟಾದ ನಂತರ ಇಮಾಮ್ ಮತ್ತು ಅಜರ್ ಜೋಡಿ ಮೋಹಕ ಆಟವಾಡಿದರು. ಮುರಿಯದ ಎರಡನೇ ವಿಕೆಟ್‌ಗೆ ಇವರಿಬ್ಬರು 140 ರನ್ ಸೇರಿಸಿದರು. ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 1 ವಿಕೆಟ್‌ಗೆ 245 (ಅಬ್ದುಲ್ ಶಫೀಕ್ 44, ಇಮಾನ್ ಉಲ್ ಹಕ್ ಬ್ಯಾಟಿಂಗ್ 132, ಅಜರ್ ಅಲಿ ಬ್ಯಾಟಿಂಗ್ 64; ಮಿಚೆಲ್ ನೇಥನ್ ಲಯನ್ 87ಕ್ಕೆ1). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.