ಪ್ರಶಸ್ತಿ ಸುತ್ತಿಗೆ ಕರ್ನಾಟಕ; ಒಡಿಶಾ ಎದುರಾಳಿ ಬೆಂಗಳೂರು: ಉತ್ತಮ ಆಟವಾಡಿದ ಕರ್ನಾಟಕದ ಮಹಿಳೆಯರ ತಂಡವು ಇಂಡಸ್‌ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಒಡಿಶಾ ತಂಡಕ್ಕೆ ಮುಖಾಮುಖಿಯಾಗಲಿದೆ. ಶುಕ್ರವಾರ ಆಂಧ್ರ ತಂಡದ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ 62 ರನ್‌ಗಳಿಂದ ಆತಿಥೇಯ ತಂಡ ಗೆದ್ದಿತು. ಬೆಂಗಳೂರಿನ ಅಲ್ಟಾಯರ್‌ ಕ್ರಿಕೆಟ್ ಅಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು,15 ಓವರ್‌ಗಳಲ್ಲಿ 7 ವಿಕೆಟ್‌ಗೆ 161 ರನ್ ಗಳಿಸಿತು. ಗುರಿ ಬೆನ್ನತ್ತಿದ ಆಂಧ್ರಪ್ರದೇಶ ಮಹಿಳೆಯರ ತಂಡ 15 ಓವರ್‌ಗಳು ಮುಕ್ತಾಯಗೊಂಡಾಗ 2 ವಿಕೆಟ್ ನಷ್ಟಕ್ಕೆ 99 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಕರ್ನಾಟಕದ ಜಯದಲ್ಲಿ ಗಂಗಾ (41 ರನ್‌), ವರ್ಷಾ ಯು. (32) ಮತ್ತು ಸುನೀತಾ (44 ರನ್) ಮಿಂಚಿದರು. ಆಂಧ್ರ ಪರ ರವಣಿ (ಔಟಾಗದೆ 30) ಮತ್ತು ಕೆ. ಲಲಿತಾ (28) ಆಟ ವ್ಯರ್ಥವಾಯಿತು. ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ದೆಹಲಿ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಒಡಿಶಾ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 187 ರನ್ ಬಾರಿಸಿತು. ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ದೆಹಲಿ 11.2 ಓವರ್‌ಗಳಲ್ಲಿ 58 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲೊಪ್ಪಿಕೊಂಡಿತು. ಒಡಿಶಾ ಪರ ರಚನಾ ಜನಾ ಅಜೇಯ 82 ರನ್ ಗಳಿಸಿದರೆ, ಝಿಲಿ ಬಿರುಹಾ ಔಟಾಗದೆ 93 ರನ್ ಗಳಿಸಿದರು. ದೆಹಲಿ ಪರ ಗುಲ್ಶನ್ ನಾಜ್ (12) ಹೊರತುಪಡಿಸಿದರೆ ಯಾರೂ ಒಂದಂಕಿ ಮೊತ್ತ ದಾಟಲಿಲ್ಲ. ಸಂಕ್ಷಿಪ್ತ ಸ್ಕೋರು:ಕರ್ನಾಟಕ : 15 ಓವರ್‌ಗಳಲ್ಲಿ 7 ವಿಕೆಟ್‌ಗೆ 161 (ಗಂಗಾ 41, ವರ್ಷಾ ಯು. 32, ಸುನಿತಾ ಔಟಾಗದೆ 44; ಲೊಲ್ಲ ವಂದನಾ 24ಕ್ಕೆ2). ಆಂಧ್ರ: 15 ಓವರ್‌ಗಳಲ್ಲಿ 2 ವಿಕೆಟ್‌ಗೆ 99 (ರವಣಿ ಔಟಾಗದೆ 30, ಕೆ. ಲಲಿತಾ 28; ವರ್ಷಾ ಯು . 19ಕ್ಕೆ1). ಫಲಿತಾಂಶ: ಕರ್ನಾಟಕ ತಂಡಕ್ಕೆ 62 ರನ್‌ಗಳ ಜಯ ಒಡಿಶಾ: 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 187 (ರಚನಾ ಜನಾ ಔಟಾಗದೆ 82, ಝಿಲಿ ಬಿರುಹಾ ಔಟಾಗದೆ 93). ದೆಹಲಿ: 15 ಓವರ್‌ಗಳಲ್ಲಿ 58 (ಗುಲ್ಶನ್ 12; ಪ್ರಬತಿ ಆರ್ ಡಿ 21ಕ್ಕೆ1). ಫಲಿತಾಂಶ: ಒಡಿಶಾ ತಂಡಕ್ಕೆ 129 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.