ಚಾಂಪಿಯನ್‌ ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಆಘಾತ ಹ್ಯಾಮಿಲ್ಟನ್‌: ರಾಚೆಲ್ ಹೇನ್ಸ್ ಗಳಿಸಿದ ತಾಳ್ಮೆಯ ಶತಕದ ಬಲದಿಂದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವಿನ ಆರಂಭ ಮಾಡಿತು. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿತು. ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೂರು ವಿಕೆಟ್‌ ಕಳೆದುಕೊಂಡು 310 ರನ್ ಗಳಿಸಿತು. ತಂಡಕ್ಕೆ ಹೇನ್ಸ್ (130 ರನ್‌, 131ಎ, 4X14, 6X1) ಮತ್ತು ನಾಯಕಿ ಮೆಗ್‌ ಲ್ಯಾನಿಂಗ್‌ (86, 110ಎ, 4X7, 6X1) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 196 ರನ್‌ ಸೇರಿಸುವ ಮೂಲಕ ಬಲ ತುಂಬಿದರು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ 8 ವಿಕೆಟ್ ಕಳೆದುಕೊಂಡು 298 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ನ್ಯಾಟ್‌ ಸೀವರ್‌ (ಔಟಾಗದೆ 109, 85ಎ, 4X13) ಹೋರಾಟದ ಶತಕ ಹಾಗೂ ಟ್ಯಾಮಿ ಬೀಮೊಂಟ್‌ (74) ಅವರ ಸೊಗಸಾದ ಅರ್ಧಶತಕ್ಕೆ ಗೆಲುವು ಒಲಿಯಲಿಲ್ಲ. ಕೊನೆಯ ಮೂರು ಓವರ್‌ಗಳಲ್ಲಿ ಇಂಗ್ಲೆಂಡ್ ಜಯಕ್ಕೆ 36 ರನ್‌ಗಳ ಅಗತ್ಯವಿತ್ತು. ಆದರೆ ಒತ್ತಡ ಮೆಟ್ಟಿನಿಲ್ಲಲು ತಂಡಕ್ಕೆ ಸಾಧ್ಯವಾಗಲಿಲ್ಲ. ಪಂದ್ಯದ ಅಂತಿಮ ಓವರ್‌ನಲ್ಲಿ ಎರಡು ವಿಕೆಟ್‌ ಗಳಿಸಿದ ಜೆಸ್‌ ಜೋನಾಸನ್ (18ಕ್ಕೆ 2) ಇಂಗ್ಲೆಂಡ್‌ ತಂಡದ ಜಯದ ಆಸೆಗೆ ತಣ್ಣೀರು ಸುರಿದರು. ಇದಕ್ಕೂ ಮೊದಲು ಆಲ್‌ರೌಂಡರ್‌ ಅಲಾನಾ ಕಿಂಗ್‌ (59ಕ್ಕೆ 3), ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ್ದರು. ದಕ್ಷಿಣ ಆಫ್ರಿಕಾ ಜಯಭೇರಿ: ಡುನೆಡಿನ್‌ನಲ್ಲಿ ನಡೆದ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ತಂಡವನ್ನು 32 ರನ್‌ಗಳಿಂದ ಮಣಿಸಿತು. ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ವೇಗಿ ಆಯಬೊಂಗಾ ಖಾಕ (32ಕ್ಕೆ 4) ಪ್ರಮುಖ ಪಾತ್ರ ವಹಿಸಿದರು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 3ಕ್ಕೆ 310 (ರಾಚೆಲ್ ಹೇನ್ಸ್ 130, ಅಲಿಸ್ಸಾ ಹೀಲಿ 28, ಮೆಗ್ ಲ್ಯಾನಿಂಗ್‌ 86, ಬೆಥ್ ಮೂನಿ ಔಟಾಗದೆ 27; ನ್ಯಾಟ್ ಸೀವರ್‌ 68ಕ್ಕೆ 2, ಕ್ಯಾಥರೀನ್ ಬ್ರಂಟ್‌ 54ಕ್ಕೆ 1). ಇಂಗ್ಲೆಂಡ್‌: 50 ಓವರ್‌ಗಳಲ್ಲಿ 8ಕ್ಕೆ 298 (ಟಾಮಿ ಬಿಮೊಂಟ್‌ 74, ಹೀದರ್ ನೈಟ್‌ 40, ನ್ಯಾಟ್ ಸೀವರ್‌ ಔಟಾಗದೆ 109, ಸೋಫಿಯಾ ಡಂಕ್ಲಿ 28, ಕ್ಯಾಥರೀನ್ ಬ್ರಂಟ್‌ 25; ಮೆಗನ್ ಶುಟ್‌ 52ಕ್ಕೆ 1, ಜೆಸ್ ಜೊನಾಸನ್‌ 18ಕ್ಕೆ 2, ತಾಹಿಲಾ ಮೆಕ್‌ಗ್ರಾ 51ಕ್ಕೆ 2, ಅಲಾನಾ ಕಿಂಗ್‌ 59ಕ್ಕೆ 3). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 12 ರನ್‌ಗಳ ಜಯ. ದಕ್ಷಿಣ ಆಫ್ರಿಕಾ: 49.5 ಓವರ್‌ಗಳಲ್ಲಿ 207 (ಲೌರಾ ವೊಲ್ವಾರ್ಟ್‌ 41, ಸ್ಯುನ್‌ ಲೂಸ್‌ 25, ಮರಿಜಾನೆ ಕ್ಯಾಪ್ 42, ಕ್ಲೊ ಟ್ರೈಯನ್‌ 39; ಜಹಾನಾರ ಆಲಂ 28ಕ್ಕೆ2, ಫರಿಹಾ ತ್ರಿಶ್ನಾ 35ಕ್ಕೆ 3, ರಿತಯು ಮೋನಿ 36ಕ್ಕೆ 2, ರುಮಾನಾ ಅಹಮದ್‌ 29ಕ್ಕೆ 1). ಬಾಂಗ್ಲಾದೇಶ: 49.3 ಓವರ್‌ಗಳಲ್ಲಿ 175 ( ಶಮಿಮಾ ಸುಲ್ತಾನಾ 27, ಶರ್ಮಿನಾ ಅಖ್ತರ್‌ 34, ರುಮಾನಾ ಅಹಮದ್‌ 21, ನಿಗಾರ್ ಸುಲ್ತಾನಾ 29, ರಿತು ಮೋನಿ 27; ಆಯಾಬೊಂಗಾ ಖಾಕ 32ಕ್ಕೆ 4, ಮಸಬಾಟ ಕ್ಲಾಸ್‌ 36ಕ್ಕೆ 2). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 32 ರನ್‌ಗಳ ಜಯ. ಇಂದಿನ ಪಂದ್ಯ: ಭಾರತ– ಪಾಕಿಸ್ತಾನ ಆರಂಭ: ಬೆಳಿಗ್ಗೆ 6.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.