ಕ್ರಿಕೆಟ್‌: ಮೆಂಡಿಸ್‌ ದಾಳಿಗೆ ಕುಸಿದ ಪಾಕ್ ಗಾಲ್‌: ರಮೇಶ್‌ ಮೆಂಡಿಸ್‌ ಅವರ ಸ್ಪಿನ್‌ ದಾಳಿಗೆ ಕುಸಿದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ. ಗಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ಪಾಕಿಸ್ತಾನ, 7 ವಿಕೆಟ್‌ಗೆ 191 ರನ್‌ ಗಳಿಸಿದೆ. ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ಬಾಬರ್‌ ಅಜಮ್‌ ಬಳಗಕ್ಕೆ ಇನ್ನೂ 187 ರನ್‌ ಬೇಕಿದೆ. ಮೊದಲ ಟೆಸ್ಟ್‌ನಲ್ಲಿ ಗೆಲುವಿಗೆ ಕಾರಣರಾಗಿದ್ದ ಅಬ್ದುಲ್ಲಾ ಶಫೀಕ್‌ (0) ಅವರನ್ನು ಪಾಕ್‌ ತಂಡ ಬೇಗನೇ ಕಳೆದುಕೊಂಡಿತು. ಬಾಬರ್‌ ಅಜಮ್‌ ಕೂಡಾ ವಿಫಲರಾದರು. ಇಮಾಮ್ ಉಲ್‌ ಹಕ್‌ (32), ಮೊಹಮ್ಮದ್ ರಿಜ್ವಾನ್‌ (24) ಮತ್ತು ಫವಾದ್‌ ಆಲಂ (24) ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ರಿಜ್ವಾನ್‌ ಮತ್ತು ಫವಾದ್‌ ವಿಕೆಟ್‌ ಪಡೆದ ಮೆಂಡಿಸ್‌, ತಮ್ಮ ತಂಡದ ಹಿಡಿತ ಬಿಗಿಗೊಳಿಸಿದರು. ಅಘಾ ಸಲ್ಮಾನ್‌ (62, 126 ಎ) ಮಾತ್ರ ಅಲ್ಪ ಪ್ರತಿರೋಧ ಒಡ್ಡಿ ಅರ್ಧಶತಕ ಗಳಿಸಿದರು. ಪ್ರಭಾತ್‌ ಜಯಸೂರ್ಯ ಎಸೆತದಲ್ಲಿ ಅವರು ಔಟಾದರು. ಇದಕ್ಕೂ ಮುನ್ನ 6 ವಿಕೆಟ್‌ಗೆ 315 ರನ್‌ಗಳಿಂದ ಆಟ ಮುಂದುವರಿಸಿದ ಶ್ರೀಲಂಕಾ ತಂಡ 378 ರನ್‌ಗಳಿಗೆ ಆಲೌಟಾಯಿತು. ನಸೀಂ ಶಾ ಮತ್ತು ಯಾಸಿರ್‌ ಶಾ ತಲಾ ಮೂರು ವಿಕೆಟ್‌ ಪಡೆದರು. ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌ ಶ್ರೀಲಂಕಾ 378 (103 ಓವರ್). ಪಾಕಿಸ್ತಾನ 7ಕ್ಕೆ 191 (69.4 ಓವರ್) ಇಮಾಮ್‌ ಉಲ್‌ ಹಕ್‌ 32, ಬಾಬರ್‌ ಅಜಮ್‌ 16, ಮೊಹಮ್ಮದ್‌ ರಿಜ್ವಾನ್‌ 24, ಫವಾದ್‌ ಆಲಂ 24, ಅಘಾ ಸಲ್ಮಾನ್‌ 62, ರಮೇಶ್‌ ಮೆಂಡಿಸ್‌ 42ಕ್ಕೆ 3, ಪ್ರಭಾತ್‌ ಜಯಸೂರ್ಯ 59ಕ್ಕೆ 2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.