ಬೆಂಗಳೂರಿಗೆ ಬಂದಿಳಿದ ಭಾರತ, ಲಂಕಾ ತಂಡಗಳು ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 12ರಿಂದ ನಡೆಯಲಿರುವ ಹೊನಲು ಬೆಳಕಿನ ಟೆಸ್ಟ್‌ನಲ್ಲಿ ಆಡಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳು ಬುಧವಾರ ಬಂದಿಳಿದವು. ಮೊಹಾಲಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬಳಗವು ಭರ್ಜರಿ ಜಯ ದಾಖಲಿಸಿದೆ. ಮೂರೇ ದಿನಗಳಲ್ಲಿ ಪಂದ್ಯ ಮುಗಿದಿತ್ತು. ಅದರಿಂದಾಗಿ ಎರಡು ದಿನ ಮೊಹಾಲಿಯಲ್ಲಿಯೇ ಇದ್ದ ತಂಡಗಳು ಪಿಂಕ್ ಬಾಲ್ ಅಭ್ಯಾಸ ಮಾಡಿದ್ದವು. ಬುಧವಾರ ಖಾಸಗಿ ವಿಮಾನದ ಮೂಲಕ ಆಟಗಾರರು ಮತ್ತು ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದರು. ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರು. ಗುರುವಾರ ಮತ್ತು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಗಳು ಅಭ್ಯಾಸ ನಡೆಸಲಿವೆ. ಕಟ್ಟುನಿಟ್ಟಾದ ಬಯೋಬಬಲ್ ನಿಯಮ ಜಾರಿ ಮಾಡಲಾಗಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆ ಆಗಿಲ್ಲ. ಇದೀಗ ಹೊನಲು ಬೆಳಕಿನ ಟೆಸ್ಟ್ ನಡೆಸಲು ಕ್ರೀಡಾಂಗಣ ಸಜ್ಜಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.