ಇಂಗ್ಲೆಂಡ್ ತಂಡದ ಕೋಚ್ ಆಗಬೇಕು: ಇಂಗಿತ ವ್ಯಕ್ತಪಡಿಸಿದ್ದ ಶೇನ್ ವಾರ್ನ್ ಮೆಲ್ಬರ್ನ್ (ಪಿಟಿಐ): ತಾವು ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಬೇಕು ಎಂದು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇಂಗಿತ ವ್ಯಕ್ತಪಡಿಸಿದ್ದರು. ಸ್ಕೈ ಸ್ಪೋರ್ಟ್ಸ್‌ ಕ್ರಿಕೆಟ್ ಪಾಡ್‌ಕಾಸ್ಟ್ ನಲ್ಲಿ ಅವರು ಇಂಗ್ಲೆಂಡ್ ಕೋಚ್ ಆಗುವ ಆಸೆಯ ಕುರಿತು ಹೇಳಿದ್ದರು. ಈಚೆಗೆ ಇಂಗ್ಲೆಂಡ್ ತಂಡವು ಆ್ಯಷಸ್ ಸರಣಿಯಲ್ಲಿ 0–4ರಿಂದ ಸೋತಿತ್ತು. ಆಗ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರನ್ನು ವಜಾ ಮಾಡಲಾಗಿತ್ತು. ‘ಇಂಗ್ಲೆಂಡ್ ಕೋಚ್ ಆಗಲು ಇದು ಬಹಳ ಸೂಕ್ತವಾದ ಕಾಲ. ಆ ತಂಡವು ಉತ್ತಮವಾಗಿ ಬೆಳೆಯಲು ನಾನು ನೆರವಾಗಬಲ್ಲೆ‘ ಎಂದು ವಾರ್ನ್ ಹೇಳಿದ್ದರು. 2008ರ ಐಪಿಎಲ್‌ನಲ್ಲಿ ಶೇನ್ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಮತ್ತು ನಾಯಕರಾಗಿದ್ದರು. ಆ ವರ್ಷ ರಾಯಲ್ಸ್ ಚಾಂಪಿಯನ್ ಆಗಿತ್ತು. ‘ಇಂಗ್ಲೆಂಡ್‌ನಲ್ಲಿ ಉತ್ತಮ ಆಟಗಾರರು ಇದ್ದಾರೆ. ಆದರೆ ಅವರಲ್ಲಿರುವ ಪ್ರತಿಭೆಯ ಅರಿವು ಮೂಡಿಸಬೇಕು. ಅದರಿಂದ ಆತ್ಮವಿಶ್ವಾಸ ಹೆಚ್ಚಿ ಉತ್ತಮವಾಗಿ ಆಡಬಲ್ಲರು‘ ಎಂದಿದ್ದರು. ಇಂಗ್ಲೆಂಡ್ ತಂಡದ ಕೋಚ್ ಆಗುವ ಕುರಿತು ವಾರ್ನ್ ಅವರು ತಮ್ಮ ಕೆಲವು ಆಪ್ತರಲ್ಲಿಯೂ ಹೇಳಿಕೊಂಡಿದ್ದರು ಎಂದು ಅವರ ಮ್ಯಾನೇಜರ್ ಜೇಮ್ಸ್ ಎರಸ್ಕಿನ್ ಕೂಡ ದೃಢಪಡಿಸಿದ್ದಾರೆ. ಕ್ರೀಡಾ ವಿಜ್ಞಾನ ಒಪ್ಪಿರಲಿಲ್ಲ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಎರಡನೇ ಬೌಲರ್‌ ಹೆಗ್ಗಳಿಕೆ ವಾರ್ನ್‌ಗಿದೆ. ಆದರೆ, ಆಧುನಿಕ ಕ್ರಿಕೆಟ್‌ನಲ್ಲಿ ಆಟಗಾರರ ಫಿಟ್‌ನೆಸ್ ಮತ್ತು ಕೌಶಲ ವೃದ್ಧಿಗೆ ಬಳಸಲಾಗುತ್ತಿರುವ ಕ್ರೀಡಾ ವಿಜ್ಞಾನದ ಬಗ್ಗೆ ಅವರಿಗೆ ಅಷ್ಟೇನೂ ಒಲವು ಇರಲಿಲ್ಲ. ‘ಈ ಕಾಲದ ರಿಕವರಿ, ಮ್ಯಾಚ್‌ಅಪ್ಸ್ ಮತ್ತು ಕ್ರೀಡಾ ದತ್ತಾಂಶ ವಿಜ್ಞಾನದ ಸೂತ್ರಗಳು ನಮ್ಮ ಸಂದರ್ಭದಲ್ಲಿ ಇದ್ದಿದ್ದರೆ ನನ್ನನ್ನು ಬಿಟ್ಟುಬಿಡಿ ಎಂದು ಕೇಳಿಕೊಳ್ಳುತ್ತಿದ್ದೆ. ಆದರೆ, ಅಗ್ರಸ್ಥಾನಕ್ಕೇರಲು ಶೇಕಡಾ 100ರಷ್ಟು ಏಕಾಗ್ರತೆಯಿಂದ ಕಾರ್ಯನಿರ್ವಹಿಸಬೇಕು. ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತಿಲ್ಲವೆಂದಾದರೆ ಏಕಾಗ್ರತೆಯ ಕೊರತೆ ಇದೆ ಎಂದರ್ಥ. ಅದನ್ನು ಸರಿಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆಯೆಂಬುದನ್ನು ನಂಬಿದ್ದೇನೆ’ ಎಂದು ಶೇನ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.