ಉದ್ಯಾನನಗರಿಯ ಅಂಗಳದಲ್ಲಿ ಕ್ರಿಕೆಟ್ ‘ಹೊನಲು’: ಇಂದಿನಿಂದ ಪಿಂಕ್‌ ಬಾಲ್ ಟೆಸ್ಟ್ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗ ಜೀವಕಳೆ ತುಂಬಿದೆ. ಮೈದಾನದ ಹಸಿರು ಹುಲ್ಲಿನ ಮೇಲೆ ಹೊನಲು ಬೆಳಕಿನ ಪ್ರಖರ ಕಿರಣಗಳ ಆಟ ಮನಮುದಗಳಿಸುವಂತಿದೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಸತತ ಎರಡು ವರ್ಷಗಳಿಂದ ಮಂಕಾಗಿದ್ದ ಈ ಅಂಗಣದಲ್ಲಿ ಈಗ ಹೊಸಕಾಂತಿ ಮೂಡಿದೆ. ಐತಿಹಾಸಿಕ ಟೆಸ್ಟ್ ಪಂದ್ಯದ ಆಯೋಜನೆಗೆ ಸಿದ್ಧವಾಗಿದೆ. ಉದ್ಯಾನನಗರಿಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಸಲ ಪಿಂಕ್ ಬಾಲ್ ಟೆಸ್ಟ್ ಆಯೋಜನೆಗೊಂಡಿದ್ದು ಶನಿವಾರದಿಂದ ಆರಂಭವಾಗಲಿದೆ. ಮೊಹಾಲಿಯಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಈಗಾಗಲೇ ಗೆದ್ದಿರುವ ಭಾರತ ತಂಡವು ಬೆಂಗಳೂರಿನಲ್ಲಿಯೂ ಜಯಿಸುವ ನೆಚ್ಚಿನ ತಂಡವಾಗಿದೆ. ಎಲ್ಲ ವಿಧದಿಂದಲೂ ಶ್ರೀಲಂಕಾಗಿಂತ ಭಾರತವು ಬಲಾಢ್ಯ ತಂಡವಾಗಿದೆ. ಅಲ್ಲದೇ ಇದೇ ಮೊದಲ ಬಾರಿ ರೋಹಿತ್ ನಾಯಕತ್ವದಲ್ಲಿ ಪಂದ್ಯ ನಡೆಯಲಿದೆ. ಬೆಂಗಳೂರಿನ ರಾಹುಲ್ ದ್ರಾವಿಡ್ ಕೂಡ ಕೋಚ್ ಆದ ನಂತರ ಪ್ರಥಮ ಬಾರಿಗೆ ತವರಿನಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಕ್ರೀಡಾಂಗಣದಲ್ಲಿ ನಾಲ್ಕು ವರ್ಷಗಳ ನಂತರ ಟೆಸ್ಟ್ ಪಂದ್ಯ ನಡೆಯುತ್ತಿದೆ.ಅದರಿಂದಾಗಿಯೇ ಈ ವಾರಾಂತ್ಯದ ಪ್ರಮುಖ ಆಕರ್ಷಣೆಯಾಗಿ ಪ್ರೇಕ್ಷಕರನ್ನು ಮೈದಾನದತ್ತ ಸೆಳೆಯುವ ನಿರೀಕ್ಷೆ ಇದೆ. ಮೂರೇ ದಿನಕ್ಕೆ ಮುಕ್ತಾಯವೇ?: ಮೊಹಾಲಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವು ಕೇವಲ ಮೂರು ದಿನಗಳಲ್ಲಿಯೇ ಮುಗಿದಿತ್ತು. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ನಡೆದ ಟೆಸ್ಟ್‌ ಪಂದ್ಯಗಳ ಪೈಕಿ ಬಹಳಷ್ಟು ಮೂರು ಅಥವಾ ಮೂರುವರೆ ದಿನಗಳಲ್ಲಿ ಮುಗಿಯುತ್ತಿವೆ. ಅದರಿಂದಾಗಿ ಬೆಂಗಳೂರಿನ ಪಂದ್ಯವೂ ಮೂರು ದಿನದಲ್ಲಿ ಮುಗಿಯವುದೇ ಎಂಬ ಕುತೂಹಲ ಕೆರಳಿಸಿದೆ. ಅದರಿಂದಾಗಿಯೇ ಮೊದಲ ಮೂರು ದಿನಗಳ ಆಟದ ಎಲ್ಲ ಟಿಕೆಟ್‌ಗಳು ಬಿಕರಿಯಾಗಿದ್ದು, ನಾಲ್ಕು ಮತ್ತು ಐದನೇ ದಿನದ ಟಿಕೆಟ್‌ಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯ ಇವೆ ಎಂದು ಕೆಎಸ್‌ಸಿಎ ಮೂಲಗಳು ಹೇಳುತ್ತವೆ. ಮೊದಲ ದಿನ ಪಿಚ್‌ ವರ್ತಿಸುವ ರೀತಿಯೇ ಪಂದ್ಯದ ಫಲಿತಾಂಶಕ್ಕೆ ದಿಕ್ಸೂಚಿಯಾಗುವುದು ಖಚಿತ. ‘ಪಿಚ್‌ ಬಹಳ ಶುಷ್ಕವಾಗಿದೆ. ಆದ್ದರಿಂದ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವಂತೆ ಕಾಣುತ್ತಿದೆ’ ಎಂದು ಶ್ರೀಲಂಕಾ ತಂಡದ ನಾಯಕ ದಿಮುತ ಕರುಣರತ್ನೆ ಹೇಳಿದ್ದಾರೆ. ಇದರಿಂದಾಗಿ ಟಾಸ್ ಜಯಿಸುವ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಮೊಹಾಲಿಯಲ್ಲಿಯೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ದೊಡ್ಡ ಮೊತ್ತ ಪೇರಿಸಿತ್ತು. ನಂತರ ಇನಿಂಗ್ಸ್ ಮತ್ತು 222 ರನ್‌ಗಳ ಭಾರಿ ಅಂತರದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಸ್ಥಳೀಯ ಆಟ ಗಾರ ಮಯಂಕ್ ಅಗರವಾಲ್ ನಾಯಕ ರೋಹಿತ್ ಜೊತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಮೊಹಾಲಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಹನುಮ ವಿಹಾರಿಗೆ ಮತ್ತೊಂದು ಅವಕಾಶ ಸಿಗಬಹುದು. ಒಂದೊಮ್ಮೆ ಅವರಿಗೆ ವಿಶ್ರಾಂತಿ ನೀಡಿದರೆ ಯುವ ಬ್ಯಾಟರ್ ಶುಭಮನ್ ಗಿಲ್ ಆಡಬಹುದು. ನಾಲ್ಕರಲ್ಲಿ ವಿರಾಟ್ ಕೊಹ್ಲಿ ಮತ್ತು ಐದರಲ್ಲಿ ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತ. ಶ್ರೇಯಸ್ ಮತ್ತೊಂದು ಅವಕಾಶ ಪಡೆಯಬಹುದು. ಜಡೇಜ ಯಥಾಪ್ರಕಾರ ಏಳನೇ ಸ್ಥಾನದಲ್ಲಿ ಮತ್ತು ನಂತರದ ಕ್ರಮಾಂಕದಲ್ಲಿ ಅಶ್ವಿನ್ ಇರುವುದ ರಿಂದ ಕೆಳಹಂತದವರೆಗೂ ಬ್ಯಾಟಿಂಗ್ ಬಲಿಷ್ಠವಾಗಿದೆ. ಜಯಂತ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇದನ್ನು ಕಟ್ಟಿಹಾಕಲು ಶ್ರೀಲಂಕಾದ ಬೌಲರ್‌ಗಳಾದ ಲಕ್ಮಲ್, ಎಂಬುಲ ದೆನಿಯಾ ಮತ್ತು ಫರ್ನಾಂಡೊ ಅವರು ವಿಶೇಷ ಯೋಜನೆ ಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯವಾಗಿದೆ. ಪ್ರವಾಸಿ ಬಳಗದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಬೂಮ್ರಾ ನೇತೃತ್ವದ ಆತಿಥೇಯ ಬೌಲರ್‌ಗಳ ಪಡೆಯ ಸವಾಲನ್ನು ಎದುರಿಸಿ ದೀರ್ಘ ಇನಿಂಗ್ಸ್ ಆಡುವಲ್ಲಿ ಯಶಸ್ವಿಯಾದರೆ, ಪಂದ್ಯವು ಮೂರು ದಿನಗಳನ್ನು ದಾಟಿ ನಡೆಯಬಹುದು. ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಸಾಧನೆ ಬೆಂಗಳೂರು: ಭಾರತ ತಂಡವು ಇದುವರೆಗೆ ಮೂರು ಪಿಂಕ್ ಬಾಲ್ ಟೆಸ್ಟ್‌ಗಳಲ್ಲಿ ಆಡಿದೆ. ಅದರಲ್ಲಿ ಎರಡರಲ್ಲಿ ಗೆದ್ದು, ಒಂದರಲ್ಲಿ ಸೋತಿದೆ.ಭಾರತವು ಬಾಂಗ್ಲಾ ಮತ್ತು ಇಂಗ್ಲೆಂಡ್ ಎದುರು ಜಯಿಸಿದೆ. ಆದರೆ, ಆಸ್ಟ್ರೇಲಿಯಾ ಎದುರು ಸೋತಿತ್ತು. ಹಗಲು–ರಾತ್ರಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಕೋಲ್ಕತ್ತದಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅವರು 136 ರನ್ ಗಳಿಸಿದ್ದರು. ಶ್ರೀಲಂಕಾ ಕೂಡ 3 ಹೊನಲು–ಬೆಳಕಿನ ಟೆಸ್ಟ್‌ಗಳನ್ನು ಆಡಿದೆ. 2ರಲ್ಲಿ ಗೆದ್ದು,1ರಲ್ಲಿ ಸೋತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.