ರಾವಲ್ಪಿಂಡಿ ಕ್ರೀಡಾಂಗಣದ ಪಿಚ್ ಕಳಪೆ: ಐಸಿಸಿ ರಾವಲ್ಪಿಂಡಿ (ಪಿಟಿಐ): ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಣ ಈಚೆಗೆ ಟೆಸ್ಟ್ ಪಂದ್ಯ ನಡೆದ ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದ ಪಿಚ್ ಕಳಪೆಯಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ. ಪಂದ್ಯದ ರೆಫರಿ ರಂಜನ್ ಮದುಗಲೆ, ‘ಸಮಾನ ಸ್ಪರ್ಧೆಗೆ ಅವಕಾಶ ನೀಡುವಂತಹ ಪಿಚ್ ಇದಾಗಿರಲಿಲ್ಲ’ ಎಂದು ವರದಿ ನೀಡಿದ್ದರು. 24 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಪಿಂಡಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡವು 4 ವಿಕೆಟ್‌ಗಳಿಗೆ 476 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 252 ರನ್ ಗಳಿಸಿತ್ತು. ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 449 ರನ್‌ ಗಳಿಸಿ ಆಲೌಟ್‌ ಆಯಿತು. ಐದು ದಿನಗಳ ಪಂದ್ಯದಲ್ಲಿ ಒಟ್ಟು 1187 ರನ್‌ಗಳು ದಾಖಲಾದವು. 14 ವಿಕೆಟ್‌ಗಳು ಮಾತ್ರ ಪತನವಾದವು. ‘ಐದು ದಿನಗಳ ಅವಧಿಯಲ್ಲಿ ಪಿಚ್‌ ಸ್ವರೂಪವು ಗಣನೀಯವಾಗಿ ಬದಲಾಗಲಿಲ್ಲ. ಚೆಂಡು ಅತ್ಯಲ್ಪ ಮಟ್ಟದಲ್ಲಿ ಕೆಳಮಟ್ಟದಲ್ಲಿ ಪುಟಿಯುತ್ತಿತ್ತೆಂಬುದು ಬಿಟ್ಟರೆ ಉಳಿದಂತೆ ಯಾವುದೇ ವ್ಯತ್ಯಾಸವಿರಲಿಲ್ಲ. ವೇಗಿಗಳಿಗಾಗಲಿ ಅಥವಾ ಸ್ಪಿನ್ನರ್‌ಗಳಿಗಾಗಲೆ ಪಿಚ್ ನೆರವಾಗಲಿಲ್ಲ. ಐಸಿಸಿ ಮಾರ್ಗಸೂಚಿಯನ್ವಯ ಪಿಚ್ ಸಿದ್ಧವಾಗಿಲ್ಲವೆಂಬ ಕಾರಣಕ್ಕೆ ಕಳಪೆ ಪಟ್ಟಿಗೆ ಸೇರಿಸಲಾಗಿದೆ ‘ ಎಂದು ಐಸಿಸಿ ಪ್ರಕಟಣೆಯಲ್ಲಿ ಮದುಗಲೆ ಉಲ್ಲೇಖಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.