ಆಗಸ್ಟ್ .27ರಿಂದ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಕೊಲಂಬೊ(ಪಿಟಿಐ): ಶ್ರೀಲಂಕಾದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಏಷ್ಯಾ ಖಂಡದ ಐದು ತಂಡಗಳಾದ ಭಾರತ, ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸ್ಪರ್ಧಿಸಲಿವೆ. ಆಗಸ್ಟ್ 20ರಂದು ಕ್ವಾಲಿಫೈಯರ್ ಸುತ್ತು ಮುಗಿಯಲಿದೆ. ಅದರಲ್ಲಿ ಅಗ್ರಸ್ಥಾನ ಪಡೆದ ತಂಡವು ಟೂರ್ನಿಯ ಮುಖ್ಯ ಸುತ್ತಿಗೆ ಪ್ರವೇಶಿಸಲಿದೆ. ಅರ್ಹತಾ ಸುತ್ತಿನಲ್ಲಿ ಯುಎಇ, ಕುವೈತ್, ಸಿಂಗಪುರ ಮತ್ತು ಹಾಂಕಾಂಗ್ ಸ್ಪರ್ಧಿಸುತ್ತಿವೆ. 2018ರಲ್ಲಿ ಏಷ್ಯನ್ ಟೂರ್ನಿ ನಡೆಯದಿತ್ತು. ಕೋವಿಡ್ ಹಾವಳಿ ಕಾರಣದಿಂದಾಗಿ 2020ರಲ್ಲಿ ಶ್ರೀಲಂಕಾದಲ್ಲಿ ನಡೆಯಲಿದ್ದ ಟೂರ್ನಿಯನ್ನು ಮುಂದೂಡಲಾಗಿತ್ತು. 2022ರಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಬೇಕಿತ್ತು. ಅದನ್ನು 2023ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ನಡೆದ ಎಷಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಎಸಿಸಿ ಅಧ್ಯಕ್ಷ ಸ್ಥಾನದಲ್ಲಿ ಜಯ್ ಶಾ ಮುಂದುವರಿಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಸ್ಥಾನದಲ್ಲಿ ಮತ್ತೊಂದು ವರ್ಷ ಮುಂದುವರಿಸಲಾಗಿದೆ.2021ರ ಜನವರಿಯಲ್ಲಿ ಜಯ್ ಶಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ‘ಕೋವಿಡ್ ಮಹಾಮಾರಿಯ ಭಯ ಇನ್ನೂ ಇದೆ. ಅದರಲ್ಲಿಯೇ ಏಷ್ಯಾಮಟ್ಟದ ಕ್ರಿಕೆಟ್‌ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು‘ ಎಂದು ಶಾ ಭರವಸೆ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.