| ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ದುಬೈ: ಪಾಕಿಸ್ತಾನದ ಎದುರಿನ ಸೋಲಿನ ನಿರಾಶೆಯಿಂದ ಹೊರಬರುವ ಪ್ರಯ‌ತ್ನದಲ್ಲಿರುವ ಭಾರತ ತಂಡ, ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಟೂರ್ನಿಯ ಫೈನಲ್‌ ಪ್ರವೇಶದ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ, ದುಬೈನಲ್ಲಿ ನಡೆಯಲಿರುವ ‘ಸೂಪರ್‌ 4’ ಹಂತದ ಈ ಪಂದ್ಯದಲ್ಲಿ ರೋಹಿತ್‌ ಶರ್ಮ ಬಳಗಕ್ಕೆ ಗೆಲುವು ಅನಿವಾರ್ಯ. ತಪ್ಪುಗಳನ್ನು ತಿದ್ದಿಕೊಂಡು, ಶಿಸ್ತಿನ ಆಟವಾಡುವ ಸವಾಲು ತಂಡದ ಮುಂದಿದೆ. ಪಾಕ್‌ ಎದುರಿನ ಪಂದ್ಯದಲ್ಲಿ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದು ಚಿಂತೆಗೆ ಕಾರಣವಾಗಿದೆ. ಜಸ್‌ಪ್ರೀತ್‌ ಬೂಮ್ರಾ ಮತ್ತು ಹರ್ಷಲ್‌ ಪಟೇಲ್‌ ಅವರ ಅನುಪಸ್ಥಿಯಿಂದ ಭಾರತದ ಬೌಲಿಂಗ್‌ ವಿಭಾಗ ಟೂರ್ನಿಗೆ ಮುನ್ನವೇ ಬಲ ಕಳೆದುಕೊಂಡಿತ್ತು. ಆಲ್‌ರೌಂಡರ್‌ ರವೀಂದ್ರ ಜಡೇಜ ಗಾಯದಿಂದ ಹೊರಬಿದ್ದಿರುವುದು ಸಂಕಷ್ಟವನ್ನು ಹೆಚ್ಚಿಸಿದೆ. ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಪಾಕ್‌ ಎದುರು ಪ್ರಭಾವಿ ದಾಳಿ ನಡೆಸಿದ್ದ ಹಾರ್ದಿಕ್‌ ಪಾಂಡ್ಯ, ಬಳಿಕ ಕಳೆಗುಂದಿದ್ದಾರೆ. ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರ ಕೈಚಳಕ ನಡೆಯುತ್ತಿಲ್ಲ. ಅನಾರೋಗ್ಯದ ಕಾರಣ ಆವೇಶ್‌ ಖಾನ್‌, ಪಾಕ್‌ ಎದುರು ಆಡಿರಲಿಲ್ಲ. ಅವರು ಮಂಗಳವಾರ ಕಣಕ್ಕಿಳಿಯುವ ಸಾಧ್ಯತೆಯಿದೆ. ರಿಷಭ್‌ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಮುಂದುವರಿದಿದೆ. ಅಂತಿಮ ಇಲೆವೆನ್‌ನಲ್ಲಿ ಇಬ್ಬರಿಗೂ ಅವಕಾಶ ಲಭಿಸುವ ಸಾಧ್ಯತೆ ಕಡಿಮೆ. ಭಾನುವಾರದ ಪಂದ್ಯದಲ್ಲಿ ಕಾರ್ತಿಕ್‌ ಬದಲು ದೀಪಕ್‌ ಹೂಡಾಗೆ ಅವಕಾಶ ನೀಡಲಾಗಿತ್ತು. ಪಾಕ್‌ ಎದುರಿನ ಪಂದ್ಯದಲ್ಲಿ ಸೋತರೂ ಭಾರತ ಕೆಲವು ಸಕಾರಾತ್ಮಕ ಅಂಶಗಳನ್ನು ಕಂಡುಕೊಂಡಿತ್ತು. ರೋಹಿತ್‌ ಶರ್ಮ, ಕೆ.ಎಲ್‌.ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಅವರ ಆಟ ಅದರಲ್ಲಿ ಪ್ರಮುಖವಾದದ್ದು. ರೋಹಿತ್‌ ಮತ್ತು ರಾಹುಲ್‌ ತಂಡಕ್ಕೆ ಬಿರುಸಿನ ಆರಂಭ ನೀಡಿದ್ದರು. ಸತತ ಎರಡನೇ ಅರ್ಧಶತಕ ಗಳಿಸಿದ ಕೊಹ್ಲಿ, ಟೀಕಾಕಾರರ ಬಾಯಿಯನ್ನು ಕೆಲದಿನಗಳ ಮಟ್ಟಿಗೆ ಮುಚ್ಚಿಸಿದ್ದಾರೆ. ಲಂಕಾ ವಿರುದ್ಧವೂ ಈ ಮೂವರು ಆಕ್ರಮಣಕಾರಿ ಆಟವಾಡುವ ನಿರೀಕ್ಷೆಯಿದೆ. ಪೈಪೋಟಿ ಸಾಧ್ಯತೆ: ಸತತ ಎರಡು ಗೆಲುವಿನ ಆತ್ಮವಿಶ್ವಾಸದಲ್ಲಿರುವ ಶ್ರೀಲಂಕಾ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ದಸುನ್‌ ಶನಕ ಬಳಗ ಲೀಗ್‌ ಹಂತದಲ್ಲಿ ಬಾಂಗ್ಲಾದೇಶ ತಂಡವನ್ನು ಹಾಗೂ ‘ಸೂಪರ್‌ 4’ನ ಮೊದಲ ಪಂದ್ಯದಲ್ಲಿ ಅಫ್ಗಾನಿಸ್ತಾನವನ್ನು ಮಣಿಸಿತ್ತು. ಚರಿತ ಅಸಲಂಕಾ ಹೊರತುಪಡಿಸಿದರೆ, ಅಗ್ರ ಕ್ರಮಾಂಕದ ಎಲ್ಲ ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದಾರೆ. ದಸುನ್‌ ಶನಕ ಮತ್ತು ಕುಸಾಲ್‌ ಮೆಂಡಿಸ್‌ ಅವರು ಬಾಂಗ್ಲಾ ಎದುರು ಮಿಂಚಿದ್ದರೆ, ಧನುಷ್ಕಾ ಗುಣತಿಲಕ ಹಾಗ ಭಾನುಕ ರಾಜಪಕ್ಸ ಅವರು ಅಫ್ಗನ್‌ ವಿರುದ್ಧ ಉತ್ತಮ ಆಟವಾಡಿದ್ದರು. ಇಂದಿನ ಪಂದ್ಯ:ಭಾರತ– ಶ್ರೀಲಂಕಾ ಆರಂಭ: ಸಂಜೆ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ರವಿ ಬಿಷ್ಣೊಯಿ, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಆವೇಶ್ ಖಾನ್. ಶ್ರೀಲಂಕಾ: ದಸುನ್‌ ಶನಕ (ನಾಯಕ), ಧನುಷ್ಕಾ ಗುಣತಿಲಕ, ಪಥುಮ್‌ ನಿಸ್ಸಾಂಕ, ಕುಸಾಲ್‌ ಮೆಂಡಿಸ್, ಚರಿತ್‌ ಅಸಲಂಕಾ, ಭಾನುಕ ರಾಜಪಕ್ಸ, ಅಶೆನ್‌ ಬಂಡಾರ, ಧನಂಜಯ ಡಿಸಿಲ್ವಾ, ವನಿಂದು ಹಸರಂಗ, ಮಹೀಶ ತೀಕ್ಷಣ, ಜೆಫ್ರಿ ವಂಡೆರ್ಸೆ, ಪ್ರವೀಣ್ ಜಯವಿಕ್ರಮ, ಚಮಿಕ ಕರುಣರತ್ನೆ, ದಿಲ್ಶನ್ ಮಧುಶನಕ, ಮತೀಶ ಪತಿರನ, ನುವನಿದು ಫೆರ್ನಾಂಡೊ, ದಿನೇಶ್‌ ಚಾಂಡಿಮಲ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.