2023 | ಹ್ಯಾರಿ ಬ್ರೂಕ್‌ 100: ಸನ್‌ರೈಸರ್ಸ್‌ 228/4 ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 19ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಭರ್ಜರಿ ಬ್ಯಾಟಿಂಗ್‌ ಮಾಡಿದೆ. ರನ್‌ ಬರ ಎದುರಿಸುತ್ತಿದ್ದ ಹ್ಯಾರಿ ಬ್ರೂಕ್ಸ್‌ ಪ್ರಸ್ತುತ ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದರು. ಟಾಸ್‌ ಗೆದ್ದಿದ್ದ ಕೆಕೆಆರ್‌ ತಂಡ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನ ನೀಡಿತು. ಅದರಂತೆ, 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದೊಂದಿಗೆ 228ರನ್‌ ಗಳಿಸಿರುವ ಹೈದರಾಬಾದ್‌ ತಂಡ, ಸವಾಲಿನ ಮೊತ್ತ ಪೇರಿಸಿದೆ. ಆರಂಭಿಕರಾಗಿ ಬಂದು, ಕಡೇ ವರೆಗೆ ಬ್ಯಾಟ್‌ ಮಾಡಿದ ಹ್ಯಾರಿ ಬ್ರೂಕ್‌ 55 ಎಸೆತಗಳಲ್ಲಿ 100 ರನ್‌ ಗಳಿಸಿ ಮಿಂಚಿದರು. ಐದನೇ ಕ್ರಮಾಂಕದಲ್ಲಿ ಬಂದ ಏಡನ್‌ ಮರ್ಕರಂ 26 ಎಸೆತಗಳಲ್ಲಿ 50 ರನ್‌ ಗಳಿಸುವ ಮೂಲಕ ಗಳಿಕೆಯಲ್ಲಿ ಬ್ರೂಕ್‌ಗೆ ಜತೆಯಾದರು. ಅಂತಿಮವಾಗಿ ಸನ್‌ರೈಸರ್ಸ್‌ ತಂಡ 228 ರನ್‌ ಗಳಿಸಿತು. ಈ ಪಂದ್ಯದಲ್ಲಿ ಕೆಕೆಆರ್‌ ಪರ ಏಳು ಮಂದಿ ಬೌಲ್‌ ಮಾಡಿದ್ದು, 2.1 ಓವರ್‌ನಲ್ಲಿ 3 ವಿಕೆಟ್‌ ಗಳಿಸಿ ಆ್ಯಂಡ್ರೆ ರಸೆಲ್‌ ಮಿಂಚಿದರು. ಆದರೆ, ತಮ್ಮ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಗಾಯದ ಸಮಸ್ಯೆಗೆ ಒಳಗಾದ ರಸೆಲ್‌ ಅಂಗಣದಿಂದ ಹೊರ ನಡೆದರು. ಉತ್ತಮವಾಗಿ ಬೌಲ್‌ ಮಾಡುತ್ತಿದ್ದ ರಸೆಲ್‌ ಅನುಪಸ್ಥಿತಿ ಕೆಕೆಆರ್‌ಗೆ ದುಬಾರಿಯಾಗಿ ಪರಿಣಮಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.