2023 | ಹಾರ್ದಿಕ್–ಸಂಜು ಪಡೆಗಳ ಸಮಬಲ ಹೋರಾಟ ನಿರೀಕ್ಷೆ ಅಹಮದಾಬಾದ್ : ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಬಳಗವು ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡವು ಈ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿದೆ. ಒಂದರಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವೂ ಮೂರು ಪಂದ್ಯ ಜಯಿಸಿ, ಒಂದರಲ್ಲಿ ಮಾತ್ರ ಸೋತಿದೆ. ಉಭಯ ತಂಡಗಳೂ ತಲಾ ಆರು ಅಂಕ ಗಳಿಸಿವೆ. ಆದರೆ ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ರಾಜಸ್ಥಾನವು ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ಸಮಬಲದ ಹೋರಾಟ ನಡೆಯುವ ನಿರೀಕ್ಷೆ ಗರಿಗೆದರಿದೆ. ಟೈಟನ್ಸ್ ಬಳಗದ ಆರಂಭಿಕ ಜೋಡಿ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಇನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸಾಯಿ ಸುದರ್ಶನ್, ವಿಜಯಶಂಕರ್ ಅವರೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಲಯದಲ್ಲಿದ್ದಾರೆ. ಇವರನ್ನು ಕಟ್ಟಿಹಾಕುವ ಸವಾಲು ರಾಜಸ್ಥಾನ ತಂಡದ ಬೌಲರ್‌ಗಳಾದ ಸಂದೀಪ್ ಶರ್ಮಾ, ಆರ್.ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಅವರ ಮುಂದಿದೆ. ಕೊನೆಯ ಎಸೆತದವರೆಗೂ ರೋಚಕತೆ ಕೆರಳಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಸಂದೀಪ್ ಶರ್ಮಾ ಚಾಣಾಕ್ಷ ಬೌಲಿಂಗ್ ಮಾಡಿ ರಾಜಸ್ಥಾನ ತಂಡದ ಜಯಕ್ಕೆ ಕಾರಣರಾಗಿದ್ದರು. ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ತ ಪಡಿಕ್ಕಲ್ ಹಾಗೂ ಹೆಟ್ಮೆಯರ್ ಅವರು ಉತ್ತಮ ಲಯದಲ್ಲಿರುವುದರಿಂದ ರಾಜಸ್ಥಾನ ತಂಡವು ಬ್ಯಾಟಿಂಗ್‌ನಲ್ಲಿಯೂ ಪಾರಮ್ಯ ಮೆರೆಯುವ ಸಾಮರ್ಥ್ಯ ಹೊಂದಿದೆ. ತಂಡಗಳು ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಶ್ರೀಕರ್ ಭರತ್, ಅಲ್ಜರಿ ಜೋಸೆಫ್, ಜೋಶ್ ಲಿಟಲ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಮೊಹಮ್ಮದ್ ಶಮಿ, ದರ್ಶನ್ ನಾಯ್ಕಂಡೆ, ರಶೀದ್ ಖಾನ್, ವೃದ್ಧಿಮಾನ್ ಸಹಾ, ಆರ್. ಸಾಯಿಕಿಶೋರ್, ಸಾಯಿ ಸುದರ್ಶನ್, ಪ್ರದೀಪ್ ಸಂಗ್ವಾನ್, ದಸುನ್ ಶನಕಾ, ವಿಜಯಶಂಕರ್, ಮೋಹಿತ್ ಶರ್ಮಾ, ಶಿವಂ ಮಾವಿ, ರಾಹುಲ್ ತೆವಾಟಿಯಾ, ಮ್ಯಾಥ್ಯೂ ವೇಡ್, ಜಯಂತ್ ಯಾದವ್, ಯಶ್ ದಯಾಳ್. ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ತ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರಿಯಾನ್ ಪರಾಗ್, ಕುನಾಲ್ ಸಿಂಗ್ ರಾಥೋಡ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಕುಲದೀಪ್ ಸೇನ್, ಆಕಾಶ್ ವಸಿಷ್ಠ, ಆ್ಯಡಂ ಜಂಪಾ, ಕೆ.ಸಿ. ಕಾರ್ಯಪ್ಪ, ಆರ್. ಅಶ್ವಿನ್. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನೆಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.