2023: ಆರ್‌ಸಿಬಿ ವಿರುದ್ಧ ಧೋನಿ ಬಳಗದ ಜಯಭೇರಿ ಬೆಂಗಳೂರು: ಹಳದಿ ವರ್ಣದ ಪೋಷಾಕು ಧರಿಸಿ ಬಂದಿದ್ದ ತನ್ನ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ಕಾಣಿಕೆ ನೀಡಿತು. ಅದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ಫಫ್ ಡುಪ್ಲೆಸಿ ಆಟವು ನೋಡುಗರ ಮನಗೆದ್ದಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು 8 ರನ್‌ ಗಳಿಂದ ಜಯಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದ ಚೆನ್ನೈನ ಆರಂಭಿಕ ಬ್ಯಾಟರ್ ಡೇವೊನ್ ಕಾನ್ವೆ (83; 45ಎ, 4X6, 6X6) ಹಾಗೂ ಶಿವಂ ದುಬೆ (52; 27ಎ, 4X2, 6X5) ಅವರ ಬಲದಿಂದ ಚೆನ್ನೈ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 226 ರನ್ ಗಳಿಸಿತು. ಈ ಬೃಹತ್ ಮೊತ್ತಕ್ಕೆ ಆತಿಥೇಯ ತಂಡವು ಪ್ರತಿ ಹೋರಾಟ ತೋರಿತು. 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 218 ರನ್‌ ಗಳಿಸಿತು. ಆರ್‌ಸಿಬಿ ನಾಯಕ, ಆರಂಭಿಕ ಬ್ಯಾಟರ್ ಫಫ್ ಡುಪ್ಲೆಸಿ (62; 33ಎ, 4X5, 6X4) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (76; 36ಎ, 4X3, 6X8) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 126 ರನ್‌ ಗಳಿಸಿದರು.ವಿರಾಟ್ ಕೊಹ್ಲಿ ಮೊದಲ ಓವರ್‌ನಲ್ಲಿ ಔಟಾಗಿದ್ದರಿಂದ ಮೂಡಿದ್ದ ಆತಂಕವನ್ನು ಈ ಜೋಡಿ ನಿವಾರಿಸಿತು. ಇವರಿಬ್ಬರ ಅಬ್ಬರದ ಆಟದಿಂದಾಗಿ ಇನಿಂಗ್ಸ್‌ನ ಮೊದಲ ಪವರ್‌ಪ್ಲೇನಲ್ಲಿ 75 ರನ್‌ಗಳು ತಂಡದ ಖಾತೆ ಸೇರಿದವು. ಕೇವಲ 8.2 ಓವರ್‌ಗಳಲ್ಲಿ ತಂಡದ ಮೊತ್ತ 100 ರ ಗಡಿ ದಾಟಿತು. ಚೆನ್ನೈ ಫೀಲ್ಡರ್‌ಗಳು ಕೈಚೆಲ್ಲಿದ ಕ್ಯಾಚ್‌ಗಳಿಂದಾಗಿ ತಂಡದ ಗೆಲುವಿನ ಹಾದಿ ತುಸು ಕಠಿಣವಾಯಿತು. ಫಫ್ ಡುಪ್ಲೆಸಿ 52 ರನ್‌ ಗಳಿಸಿದ್ದ ಸಂದರ್ಭದಲ್ಲಿ ತೀಕ್ಷಣ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಕೈಚೆಲ್ಲಿದರು. ಧೋನಿ ಎರಡು ಕ್ಯಾಚ್‌: 13ನೇ ಓವರ್‌ನಲ್ಲಿ ತೀಕ್ಷಣ ಬೌಲಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕ್ಯಾಚ್ ಅನ್ನು ಧೋನಿ ಪಡೆಯುವುದರೊಂದಿಗೆ ಇನಿಂಗ್ಸ್‌ಗೆ ತಿರುವು ಲಭಿಸಿತು. ಎರಡು ಓವರ್‌ಗಳ ನಂತರ ಮೋಯಿನ್ ಅಲಿ ಬೌಲಿಂಗ್‌ನಲ್ಲಿ ಫಫ್ ಕೂಡ ಧೋನಿ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ತುಸು ಹೋರಾಟ ತೋರಿದ ದಿನೇಶ್ ಕಾರ್ತಿಕ್ (28 ರನ್ ) ಅವರ ವಿಕೆಟ್‌ ಗಳಿಸುವುದರೊಂದಿಗೆ ತುಷಾರ್ ದೇಶಪಾಂಡೆ ಚೆನ್ನೈ ಬಳಗದಲ್ಲಿ ವಿಶ್ವಾಸ ಇಮ್ಮಡಿಸುವಂತೆ ಮಾಡಿದರು. ಆದರೆ ಕೊನೆಯ ಓವರ್‌ನಲ್ಲಿ ಬೆಂಗಳೂರು ತಂಡಕ್ಕೆ 19 ರನ್‌ ಅಗತ್ಯವಿದ್ದಾಗ ಇಂಪ್ಯಾಕ್ಟ್‌ ಪ್ಲೇಯರ್ ಬ್ಯಾಟರ್ ಸುಯಶ್ ಒಂದು ಸಿಕ್ಸರ್ ಹೊಡೆದು ಭರವಸೆ ಮೂಡಿಸಿದ್ದರು. ಆದರೆ ಕಡೆಗೂ ಬೌಲರ್ ಪಥಿರಾಣಾ ಮೇಲುಗೈ ಸಾಧಿಸಿದರು. ಕೇವಲ 10 ರನ್‌ ಬಿಟ್ಟುಕೊಟ್ಟರು. ಸ್ಪೈಡರ್‌ ಕ್ಯಾಮ್- ದೂರು:ಆರ್‌ಸಿಬಿ ಬ್ಯಾಟರ್‌ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟ್‌ಗೆ ಬಡಿದ ಚೆಂಡು ಎತ್ತರಕ್ಕೆ ಚಿಮ್ಮಿದಾಗ ಮಹೇಂದ್ರಸಿಂಗ್ ಧೋನಿ ಕ್ಯಾಚ್ ಮಾಡಿದರು. ಆದರೆ ಈ ಸಂದರ್ಭದಲ್ಲಿ ಸ್ಪೈಡರ್‌ ಕ್ಯಾಮೆರಾದ ಚಲನವಲನದಿಂದ ಅಸಮಾಧಾನಗೊಂಡರು. ಕೂಡಲೇ ಅಂಪೈರ್‌ಗೆ ಈ ಬಗ್ಗೆ ದೂರು ನೀಡಿದರು. ಬ್ಯಾಟರ್‌ಗಳ ಅಬ್ಬರ: ಚೆನ್ನೈ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಔಟಾದ ಋತುರಾಜ್ ಗಾಯಕವಾಡ ಹಾಗೂ ಕೊನೆಯ ಓವರ್‌ನಲ್ಲಿ ಕ್ರೀಸ್‌ಗೆ ಬಂದು ಅಜೇಯ 1 ರನ್ ಹೊಡೆದ ಮಹೇಂದ್ರಸಿಂಗ್ ಧೋನಿ ಬಿಟ್ಟರೆ ಚೆನ್ನೈ ತಂಡದ ಎಲ್ಲ ಉಳಿದ ಬ್ಯಾಟರ್‌ಗಳು ಸಿಕ್ಸರ್‌ ಗಳಿಸಿದರು. ಸ್ಕೂಪ್, ಅಪ್ಪರ್ ಕಟ್, ಫ್ಲಿಕ್ ಹಾಗೂ ಡ್ರೈವ್‌ಗಳ ಭರ್ಜರಿ ಆಟವಾ ಡಿದ ನ್ಯೂಜಿಲೆಂಡ್‌ನ ಡೇವೊನ್ ಅಭಿಮಾನಿಗಳಿಗೆ ರಸದೌತಣ ನೀಡಿದರು. 16ನೇ ಓವರ್‌ನಲ್ಲಿ ಹರ್ಷಲ್ ಪಟೇಲ್‌ಗೆ ಕ್ಲೀನ್‌ಬೌಲ್ಡ್ ಆಗುವ ಮುನ್ನ ಡೇವೊನ್ ಎರಡು ಮಹತ್ವದ ಜೊತೆಯಾಟವಾಡಿದರು. ಅಜಿಂಕ್ಯ ರಹಾನೆ (37; 20ಎ) ಅವರೊಂದಿಗೆ ಎರಡನೇ ವಿಕೆಟ್‌ಗೆ 74 ರನ್‌ ಸೇರಿಸಿದರು. ನಂತರ ಡೇವೊನ್ ಅವರು ಶಿವಂ ದುಬೆಯೊಂದಿಗೆ ಮೂರನೇ ವಿಕೆಟ್‌ಗೆ 80 ರನ್ ಸೇರಿಸಿ ತಂಡವನ್ನು ದ್ವಿಶತಕದ ಸಮೀಪ ತಂದು ನಿಲ್ಲಿಸಿದರು. ಸ್ಥಳೀಯ ಹುಡುಗ, ಆರ್‌ಸಿಬಿಯ ವೈಶಾಖ ವಿಜಯಕುಮಾರ್ ಈ ಪಂದ್ಯದಲ್ಲಿ ದುಬಾರಿಯಾದರು. ಹರ್ಷಲ್ ಓವರ್ ಮೊಟಕು ಇನಿಂಗ್ಸ್‌ನ ಕೊನೆಯ ಓವರ್‌ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಎರಡು ನೋಬಾಲ್ ಹಾಗೂ ಒಂದು ವೈಡ್ ಹಾಕಿದರು. ಬ್ಯಾಟರ್‌ ಭುಜದೆತ್ತರಕ್ಕೆ ಎರಡು ಎಸೆತ ಹಾಕಿದರು. ಇದರಿಂದಾಗಿ ’ಹಂಗಾಮಿ ನಾಯಕ‘ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಹರ್ಷಲ್ ಓವರ್ ಮೊಟಕುಗೊಳಿಸಿದರು. ಉಳಿದ ನಾಲ್ಕು ಎಸೆತಗಳನ್ನು ತಾವೇ ಬೌಲ್ ಮಾಡಿದರು. ಧೋನಿ ಒಂದು ರನ್: ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಜಡೇಜ ಔಟಾದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂತಸದ ಅಲೆಗಳು ಎದ್ದವು. ಇದಕ್ಕೆ ಕಾರಣ ಮಹೇಂದ್ರಸಿಂಗ್ ಧೋನಿ ಕ್ರೀಸ್‌ಗೆ ಬಂದಿದ್ದು. ಮುಗಿಲು ಮುಟ್ಟಿದ ಘೋಷಣೆಗಳು ಪ್ರತಿಧ್ವನಿಸಿದವು. ಧೋನಿ ಒಂದು ರನ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.