2023 | ಆತ್ಮವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್‌ ಹೈದರಾಬಾದ್‌: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಹಣಾಹಣಿ ನಡೆಸಲಿವೆ. ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಉಭಯ ತಂಡಗಳು, ಬಳಿಕದ ಎರಡೂ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿವೆ. ಆದ್ದರಿಂದ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಸೂರ್ಯಕುಮಾರ್‌ ಯಾದವ್‌ ಕೊನೆಗೂ ಲಯ ಕಂಡುಕೊಂಡಿರುವುದು ಮುಂಬೈ ಇಂಡಿಯನ್ಸ್‌ ತಂಡದ ಬಲವನ್ನು ಹೆಚ್ಚಿಸಿದೆ. ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಅವರು 25 ಎಸೆತಗಳಲ್ಲಿ 43 ರನ್‌ ಗಳಿಸಿದ್ದರು. ಇಶಾನ್‌ ಕಿಶನ್‌ ಕೂಡಾ ಅಬ್ಬರದ ಆಟವಾಡಿದ್ದರು. ಕೋಲ್ಕತ್ತ ನೀಡಿದ್ದ 186 ರನ್‌ಗಳ ಗುರಿಯನ್ನು ಇನ್ನೂ 14 ಎಸೆತಗಳು ಇರುವಂತೆಯೇ ತಲುಪಿ, ಐದು ವಿಕೆಟ್‌ಗಳಿಂದ ಗೆದ್ದಿತ್ತು. ಮೊದಲ ಎರಡು ಪಂದ್ಯಗಳಲ್ಲಿ ನೀರಸ ಆಟವಾಡಿದ್ದ ರೋಹಿತ್‌ ಶರ್ಮಾ ಬಳಗ, ಇದೀಗ ಪ್ರಬಲ ತಂಡವಾಗಿ ರೂಪುಗೊಳ್ಳುತ್ತಿದೆ. ತಿಲಕ್‌ ವರ್ಮಾ, ಕೆಮರಾನ್‌ ಗ್ರೀನ್‌ ಮತ್ತು ಟಿಮ್‌ ಡೇವಿಡ್‌ ಅವರೂ ಉತ್ತಮ ಲಯದಲ್ಲಿದ್ದಾರೆ. ಅನುಭವಿ ಸ್ಪಿನ್ನರ್ ಪೀಯೂಷ್‌ ಚಾವ್ಲಾ ಮತ್ತು ಯುವ ಬೌಲರ್‌ ಹೃತಿಕ್‌ ಶೋಕೀನ್‌ ಅವರು ಪರಿಣಾಮಕಾರಿ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಜೋಫ್ರಾ ಅರ್ಚರ್‌ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್‌ ವಿಭಾಗದ ಶಕ್ತಿ ಅಲ್ಪ ಕುಂದಿದೆ. ಮೊದಲ ಪಂದ್ಯದಲ್ಲಿ ಮೊಣಕೈ ಗಾಯಕ್ಕೆ ಒಳಗಾಗಿದ್ದ ಅವರು ಬಳಿಕ ಕಣಕ್ಕಿಳಿದಿಲ್ಲ. ಭಾನುವಾರ ಪದಾರ್ಪಣೆ ಮಾಡಿದ್ದ ಅರ್ಜುನ್‌ ತೆಂಡೂಲ್ಕರ್‌ ಮತ್ತು ಡುವಾನ್ ಜನ್ಸೆನ್‌ ಅವರಿಗೆ ತಂಡವು ಮತ್ತೊಂದು ಅವಕಾಶ ನೀಡುವುದೇ ಎಂಬುದನ್ನು ನೋಡಬೇಕು. ಏಡನ್‌ ಮರ್ಕರಂ ನೇತೃತ್ವದ ಹೈದರಾಬಾದ್‌ ತಂಡವೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಈ ಬಾರಿಯ ಟೂರ್ನಿಯಲ್ಲಿ ಮೊದಲ ಶತಕ ಗಳಿಸಿರುವ ಹ್ಯಾರಿ ಬ್ರೂಕ್ ಮತ್ತು ಪಂಜಾಬ್‌ ಕಿಂಗ್ಸ್‌ ವಿರುದ್ಧ 48 ಎಸೆತಗಳಲ್ಲಿ 74 ರನ್‌ ಗಳಿಸಿದ್ದ ಅಭಿಷೇಕ್‌ ತ್ರಿಪಾಠಿ ಮೂಲಕ ಹೈದರಾಬಾದ್‌ ತಂಡ ಇಬ್ಬರು ಹೊಸ ‘ಹೀರೊ’ಗಳನ್ನು ಕಂಡುಕೊಂಡಿದೆ. ಅವಳಿ ಸಹೋದರರ ಸವಾಲು: ದಕ್ಷಿಣ ಆಫ್ರಿಕಾದ ಡುವಾನ್ ಜನ್ಸೆನ್‌ ಅವರು ಮುಂಬೈ ತಂಡದಲ್ಲಿದ್ದರೆ, ಅವರ ಅವಳಿ ಸಹೋದರ ಮಾರ್ಕೊ ಜನ್ಸೆನ್‌ ಹೈದರಾಬಾದ್‌ ತಂಡದಲ್ಲಿದ್ದಾರೆ. ಅಂತಿಮ ಇಲೆವೆನ್‌ನಲ್ಲಿ ಇಬ್ಬರಿಗೂ ಅವಕಾಶ ಸಿಕ್ಕರೆ ಅವಳಿ ಸಹೋದರರ ನಡುವಣ ಪೈಪೋಟಿಯಿಂದ ಈ ಪಂದ್ಯ ಗಮನ ಸೆಳೆಯಲಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ವಾಹಿನಿ, ಜಿಯೊಸಿನೆಮಾ ಆ್ಯಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.