2023 | ಹೆಟ್ಮಯೆರ್‌ ಅಬ್ಬರ: ರಾಯಲ್ಸ್‌ಗೆ ಗೆಲುವು ಅಹಮದಾಬಾದ್: ಸಂಜು ಸ್ಯಾಮ್ಸನ್‌ (60 ರನ್‌, 32 ಎ.) ಮತ್ತು ಶಿಮ್ರೊನ್‌ ಹೆಟ್ಮಯೆರ್‌ (ಅಜೇಯ 56, 26 ಎ.) ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 177 ರನ್ ಗಳಿಸಿತು. ರಾಯಲ್ಸ್‌ 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 179 ರನ್‌ ಗಳಿಸಿ ಗೆದ್ದಿತು. ‌‌ 55 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡ ರಾಯಲ್ಸ್‌, ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಸಂಜು ಮತ್ತು ಹೆಟ್ಮಯೆರ್‌ ಅಮೋಘ ಆಟದಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಾಲ್ಕನೇ ಗೆಲುವು ಪಡೆದ ರಾಯಲ್ಸ್‌ ತಂಡ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು. ಟೈಟನ್ಸ್‌ ತಂಡವು ಶುಭಮನ್ ಗಿಲ್‌ (45; 34ಎ, 4X4, 6X1) ಮತ್ತು ಡೇವಿಡ್‌ ಮಿಲ್ಲರ್‌ (46 ರನ್, 30ಎ.) ಅವರ ಉತ್ತಮ ಆಟದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತ್ತು. ಸಂಕ್ಷಿಪ್ತ ಸ್ಕೋರು: ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 177 (ಶುಭಮನ್ ಗಿಲ್ 45, ಸಾಯಿ ಸುದರ್ಶನ್ 20, ಹಾರ್ದಿಕ್ ಪಾಂಡ್ಯ 28, ಡೇವಿಡ್ ಮಿಲ್ಲರ್ 46, ಅಭಿನವ್ ಮನೋಹರ್ 27, ಸಂದೀಪ್ ಶರ್ಮಾ 25ಕ್ಕೆ2, ಟ್ರೆಂಟ್ ಬೌಲ್ಟ್ 46ಕ್ಕೆ1) ರಾಜಸ್ಥಾನ ರಾಯಲ್ಸ್‌: 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 179 (ದೇವದತ್ತ ಪಡಿಕ್ಕಲ್‌ 26, ಸಂಜು ಸ್ಯಾಮ್ಸನ್‌ 60, ಶಿಮ್ರೊನ್‌ ಹೆಟ್ಮಯೆರ್‌ ಔಟಾಗದೆ 56, ಶಮಿ 25ಕ್ಕೆ 3, ರಶೀದ್‌ ಖಾನ್‌ 46ಕ್ಕೆ 2) ಫಲಿತಾಂಶ: ರಾಯಲ್ಸ್‌ಗೆ 3 ವಿಕೆಟ್‌ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.