2023 | ಕೆಕೆಆರ್‌ಗೆ ಚೆನ್ನೈ ಸವಾಲು, ಈಡನ್‌ನಲ್ಲಿ ಧೋನಿ ಕೊನೆಯ ಪಂದ್ಯ? ಕೋಲ್ಕತ್ತ: ಸತತ ಮೂರು ಪಂದ್ಯಗಳಲ್ಲಿ ಸೋತು ಹತಾಶೆಯಲ್ಲಿರುವ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದವರು ಗೆಲುವಿನ ಹಾದಿಗೆ ಮರಳುವ ತವಕದಲ್ಲಿದ್ದಾರೆ. ಕೋಲ್ಕತ್ತದ ತಂಡ ಭಾನುವಾರ ಇಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಆತ್ಮವಿಶ್ವಾಸದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಸವಾಲನ್ನು ಎದುರಿಸಬೇಕಾಗಿದೆ. ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್‌ ವಿರುದ್ಧ ಅಮೋಘ ಗೆಲುವು ದಾಖಲಿಸಿ ಭರವಸೆ ಮೂಡಿಸಿದ್ದ ನಿತೀಶ್‌ ರಾಣಾ ಬಳಗದ ಪ್ರದರ್ಶನ ಇದ್ದಕ್ಕಿದ್ದಂತೆ ಕುಸಿತ ಕಂಡಿದೆ. ದುರ್ಬಲ ತಂಡಗಳೆದುರೂ ಅದು ಮಂಡಿ ಯೂರಿದೆ. 6 ಪಂದ್ಯಗಳಲ್ಲಿ ನಾಲ್ಕೇ ಪಾಯಿಂಟ್ಸ್‌ ಗಳಿಸಿದೆ. ಈಡನ್‌ನಲ್ಲಿ ಧೋನಿ ಕೊನೆಯ ಪಂದ್ಯ?: ಚೆನ್ನೈ ನಾಯಕ ಧೋನಿ ಅವರಿಗೆ ಈಡನ್‌ ಗಾರ್ಡನ್‌ನಲ್ಲಿ ಇದು ಕೊನೆಯ ಪಂದ್ಯವಾಗಬಹುದೆಂದು ಹೇಳಲಾಗುತ್ತಿದೆ. ಇದೂ ಕೆಕೆಆರ್‌ ತಂಡದ ಮೇಲೆ ಭಾವನಾತ್ಮಕ ಒತ್ತಡ ಹೇರಬಹುದು. ಮೊದಲ ಪಂದ್ಯದಲ್ಲಿ ಗುಜರಾತ್‌ಗೆ ಮಣಿದ ನಂತರ ಅಮೋಘವಾಗಿ ಚೇತರಿಸಿಕೊಂಡಿರುವ ಚೆನ್ನೈ ಆತ್ಮ ವಿಶ್ವಾಸದಲ್ಲಿದೆ. ಆರಂಭ ಆಟಗಾರರಾದ ಡೇವೊನ್‌ ಕಾನ್ವೆ ಮತ್ತು ಋತುರಾಜ್‌ ಗಾಯಕವಾಡ ಜೋಡಿ ಸೊಗಸಾಗಿ ಆಡುತ್ತಿದೆ. ಅವರಿಗೆ ಸುನೀಲ್‌ ನಾರಾ ಯಣ್ ಮತ್ತು ವರುಣ್‌ ಚಕ್ರವರ್ತಿ ಸವಾಲಾಗುವರೇ ಎಂಬುದು ಕುತೂಹಲಕರ. ಪಂದ್ಯ ಆರಂಭ: ರಾತ್ರಿ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.