2023 | ರಾಹುಲ್ ಹೋರಾಟ ವ್ಯರ್ಥ, ಲಖನೌ ವಿರುದ್ಧ ಗುಜರಾತ್‌ಗೆ ಜಯ ಲಖನೌ: ನಾಯಕ ಕೆ.ಎಲ್. ರಾಹುಲ್ ಅವರು ತಮ್ಮ ‘ನಿಷ್ಫಲ’ವಾದ ಬ್ಯಾಟಿಂಗ್‌ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಗೆಲುವಿನ ಹಾದಿಯಿಂದ ಸೋಲಿನತ್ತ ಮುನ್ನಡೆಸಿದರು! ಶನಿವಾರ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸುಲಭ ವಾಗಿ ಜಯಿಸಬೇಕಿದ್ದ ಪಂದ್ಯದಲ್ಲಿ ಲಖನೌ ತಂಡವು ಏಳು ರನ್‌ಗಳಿಂದ ಗುಜರಾತ್ ಟೈಟನ್ಸ್‌ಗೆ ಶರಣಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವನ್ನುಲಖನೌ ಬೌಲಿಂಗ್ ಪಡೆಯು 135 ರನ್‌ಗಳಿಗೆ ಕಟ್ಟಿಹಾಕಿತು. ಆದರೆ ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಲಖನೌ ತಂಡಕ್ಕೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಲಖನೌ ತಂಡವು 14 ಓವರ್‌ ಗಳಲ್ಲಿ 1 ವಿಕೆಟ್‌ಗೆ 105 ರನ್ ಗಳಿಸಿತ್ತು. ಕೊನೆಯ 36 ಎಸೆತಗಳಲ್ಲಿ ಜಯಿಸಲು 31 ರನ್‌ಗಳ ಅವಶ್ಯಕತೆ ಇತ್ತು. ಆದರೆ ಈ ಹಂತದಲ್ಲಿ ಆತಿಥೇಯ ತಂಡವು ಎಡವಿತು. ಅರ್ಧಶತಕ ಗಳಿಸಿದ ರಾಹುಲ್ (68; 61ಎ) ಕೊನೆಯ ಹಂತದ ಓವರ್‌ಗಳಲ್ಲಿ ಬಿರುಸಿನ ಆಟವಾಡುವಲ್ಲಿ ವಿಫಲರಾದರು. ಅದರಲ್ಲೂ ಮೊಹಮ್ಮದ್ ಶಮಿ ಹಾಕಿದ 19ನೇ ಓವರ್‌ನಲ್ಲಿ ರಕ್ಷಣಾತ್ಮಕವಾಗಿ ಆಡಿದ ರಾಹುಲ್ ಅವರಿಂದಾಗಿ ಕೇವಲ ಐದು ರನ್‌ಗಳು ಮಾತ್ರ ತಂಡದ ಖಾತೆ ಸೇರಿದವು. ಕೊನೆಯ ಓವರ್‌ನಲ್ಲಿ 12 ರನ್‌ಗಳ ಅಗತ್ಯವಿದ್ದಾಗ ಅನುಭವಿ ಬೌಲರ್ ಮೋಹಿತ್ ಶರ್ಮಾ ಎರಡು ವಿಕೆಟ್ (ರಾಹುಲ್ ಹಾಗೂ ಮಾರ್ಕಸ್ ಸ್ಟೊಯಿನಿಸ್) ಗಳಿಸಿದರು. ಅಲ್ಲದೇ ಇದೇ ಓವರ್‌ನಲ್ಲಿ ಆಯುಷ್ ಬಡೋನಿ ಹಾಗೂ ದೀಪಕ್ ಹೂಡಾ ರನೌಟ್ ಆದರು. ಇದರಿಂದಾಗಿ ಲಖನೌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 128 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆದರೆ ಸೋಲಿನ ಸಂಪೂರ್ಣ ಹೊಣೆ ನಾಯಕ ರಾಹುಲ್ ಮೇಲಿದೆ. ಅವರು 33 ಎಸೆತಗಳಲ್ಲಿ 50 ರನ್ ಗಳಿಸಿದರು. ನಂತರದ 18 ರನ್‌ ಗಳಿಸಲು ಅವರು 28 ಎಸೆತಗಳನ್ನು ಆಡಿದರು. ಇದರಿಂದಾಗಿ ರನ್‌ ಗಳಿಕೆಯ ವೇಗ ಕಡಿಮೆಯಾಯಿತು. ಇದಕ್ಕೂ ಮುನ್ನ ರಾಹುಲ್ ಅವರು ಕೈಲ್ ಮೇಯರ್ಸ್ ಜೊತೆಗೆ 55 ಮತ್ತು ಕೃಣಾಲ್ ಪಾಂಡ್ಯ ಅವರೊಂದಿಗೆ 51 ರನ್‌ಗಳ ಜೊತೆಯಾಟವನ್ನೂ ಆಡಿದ್ದರು. ಇದರಿಂದಾಗಿ ತಂಡವು ಸುಲಭವಾಗಿ ಗೆಲ್ಲುವ ನಿರೀಕ್ಷೆ ಮೂಡಿತ್ತು. ಆದರೆ ಪಂದ್ಯದ ಕೊನೆಯ ಐದು ಓವರ್‌ಗಳ ಆಟದಲ್ಲಿ ಲಖನೌ ಸೋಲಿನತ್ತ ಸಾಗಿತು. 136 ರನ್‌ಗಳ ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳುವುದು ಕಠಿಣ ಎಂಬುದು ಗುಜರಾತ್ ತಂಡದ ಆಭಿಮಾನಿಗಳಿಗೂ ಮನದಟ್ಟಾಗಿತ್ತು. ಆದರೆ ಎಡಗೈ ಸ್ಪಿನ್ನರ್ ನೂರ್ ಅಹಮದ್ (18ಕ್ಕೆ2) ಮತ್ತು ಅನುಭವಿ ಶಮಿ ಅವರ ಬೌಲಿಂಗ್‌ ಗುಜರಾತ್ ತಂಡಕ್ಕೆ ಗೆಲುವಿನ ಹಾದಿತೋರಿದವು. 🤯🤯@gujarat_titans 7- 🙌 ▶️ ://./TtAH2CiXVI# | # ../1H6bd2yVdT ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.